

ಶಿವಮೊಗ್ಗ: ಈ ಬಾರಿ ಸಕ್ರೆಬೈಲು ಆನೆ ಬಿಡಾರದ ಒಂದು ಆನೆಗೆ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುವ ಅದೃಷ್ಟ ಸಿಗಲಿದೆಯೇ? ಇಂತಹದೊಂದು ಕೌತುಕದ ಪ್ರಶ್ನೆ ಹುಟ್ಟಲು ಕಾರಣ ಮೈಸೂರು ದಸರಾಕ್ಕೆ ಗಜಪಡೆ ಅಂತಿಮಗೊಳಿಸುವ ಹೊಣೆ ಹೊತ್ತಿರುವ ಆಯ್ಕೆ ಸಮಿತಿ ಸೋಮವಾರ ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದು.
ಮೈಸೂರು ದಸರಾಕ್ಕಾಗಿ 20-25 ಆನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳ ಪೈಕಿ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿವೆ. ಇಷ್ಟು ವರ್ಷ ದುಬಾರೆ, ಮತ್ತಿಗೋಡು, ರಾಮಾಪುರ ಬಿಡಾರಗಳಿಂದ ಆನೆಗಳ ಆಯ್ಕೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸಕ್ರೆಬೈಲು ಬಿಡಾರದ ಆನೆಗಳಿಗೆ ಮೈಸೂರು ದಸರಾದಲ್ಲಿ ಭಾಗವಹಿಸುವ ಅವಕಾಶ ದೊರೆಯುವ ಸಾಧ್ಯತೆಗಳಿವೆ.
ಅರಣ್ಯಾಧಿಕಾರಿಗಳು, ವನ್ಯಜೀವಿ ವಿಭಾಗದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಸಕ್ರೆಬೈಲು ಆನೆ ಬಿಡಾರಕ್ಕೆ ಸೋಮವಾರ ಭೇಟಿ ನೀಡಿದೆ. ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಸಮ್ಮುಖದಲ್ಲಿ ಮೈಸೂರಿನ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್ ನೇತೃತ್ವದ ತಂಡ ಬಿಡಾರದ ಆನೆಗಳ ಮಾಹಿತಿ ಸಂಗ್ರಹಿಸಿದೆ.
ಮೈಸೂರ ದಸರಾ ಜಂಬೂ ಸವಾರಿಯ ಅಂತಿಮ ತಂಡದಲ್ಲಿ ಸಕ್ರೆಬೈಲಿನ ಸಾಗರ್ ಸ್ಥಾನ ಪಡೆಯುವವನೇ ಎಂಬ ಕುತೂಹಲ ಮೂಡಿದೆ. ಹಲವು ವರ್ಷಗಳಿಂದ ಶಿವಮೊಗ್ಗ ದಸರಾದಲ್ಲಿ ಚಾಮುಂಡೇಶ್ವರಿ ಪುತ್ಥಳಿಯನ್ನು ಹೊತ್ತು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿರುವ ಸಾಗರ್ ಜನದಟ್ಟಣೆಗೆ ಅಂಜಿದವನಲ್ಲ.
ಜಂಬೂ ಸವಾರಿಯಲ್ಲಿ ಎಂದೂ ತಂಟೆ ಮಾಡಿಲ್ಲ. ಅನೇಕ ಕಾಡಾನೆ, ಹುಲಿ, ಚಿರತೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗಹಿಸಿದ ಧೈರ್ಯವಂತ ಸಾಗರ್. ಆರೋಗ್ಯದ ವಿಷಯದಲ್ಲೂ ಈತ ಸಂಪೂರ್ಣ ಫಿಟ್ ಎನಿಸಿಕೊಂಡಿದ್ದಾನೆ. ಹೀಗಾಗಿ ಸಕ್ರೆಬೈಲು ಬಿಡಾರದಿಂದ ಅಧಿಕಾರಿಗಳ ಮೊದಲ ಆಯ್ಕೆ ಸಾಗರ್ ಎಂದಾದರೆ ಅಚ್ಚರಿಯೇನಿಲ್ಲ. ಸೋಮವಾರ ಸಾಗರ್ ಜತೆಗೆ ಆಲೆ, ಕಾಡಿನಲ್ಲಿ ಸೆರೆಸಿಕ್ಕು ಪಳಗಿರುವ ಬಾಲಣ್ಣ ಬಗ್ಗೆಯೂ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹಿಸಿ ಕೆಲ ಪರೀಕ್ಷೆ ನಡೆಸಿದೆ. ಈ ಮೂವರಲ್ಲಿ ಯಾರು ಮೈಸೂರು ದಸಾರದಲ್ಲಿ ಭಾಗವಹಿಸಿದರೂ ಅದು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ಸಂಗತಿಯೇ ಸರಿ.
ಮೈಸೂರಿನಿಂದ ಆಗಮಿಸಿದ್ದ ದಸರಾ ಆನೆಗಳ ಆಯ್ಕೆ ಸಮಿತಿ ಅಧಿಕಾರಿಗಳು ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಆಲೆ ಹಾಗೂ ಬಾಲಣ್ಣ ಬಗ್ಗೆ ಮಾಹಿತಿ ಪಡೆದಿದ್ದಾರೆ. ದಸರಾದಲ್ಲಿ ಭಾಗವಹಿಸುವ ಆನೆಗಳ ಅಂತಿಮ ಪಟ್ಟಿ ಬಿಡುಗಡೆ ಯಾವಾಗ ಎಂಬುದು ನಿರ್ಧಿಷ್ಟವಾಗಿ ತಿಳಿದಿಲ್ಲ. ಈ ಮೂರು ಆನೆಗಳ ಪೈಕಿ ಒಂದು ಆನೆ ಮೈಸೂರು ದಸರಾದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ತಿಳಿಸಿದರು.