ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

7 skpp 3
Published on

ಸಕಲೇಶಪುರ: ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಯುವ ರೈತ ಸಂಘದ ಪದಾಧಿಕಾರಿಗಳು ಕಾಲೇಜು ಕಟ್ಟಡದ ಎದುರು ಪ್ರತಿಭಟನೆ ನಡೆಸಿದರು.


ಕಾಲೇಜಿಗೆ ಮೂರು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕೊಠಡಿಗಳು ಶಿಥಿಲಗೊಂಡ ಕಾರಣದಿಂದಾಗಿ ಗ್ರಾಮಸ್ಥರು ಕಾಲೇಜಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ 2006ರಲ್ಲಿ ಗ್ರಂಥಾಲಯ ಸೇರಿ 6 ಕೊಠಡಿಗಳ ಹೊಸ ಕಾಲೇಜು ಕಟ್ಟಡದ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣ ಸಹ ವೇಗವಾಗಿ ನಡೆದಿತ್ತು.


2008ರ ವೇಳೆಗೆ ಕಟ್ಟಡದ ಕಾಮಗಾರಿ ಶೇ.90ರಷ್ಟು ಮುಗಿದಿದ್ದು, ಅನುದಾನದ ಕೊರತೆ ಕಾರಣ ನೀಡಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಟ್ಟಡ ಕಾಮಗಾರಿ ಸ್ಥಗಿತಗೊಂಡ 15 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಪಾಳುಬಿದ್ದ ಕಟ್ಟಡ ಈಗ ಅನೈತಿಕ ತಾಣವಾಗಿ ಮಾರ್ಪಟ್ಟಿದ್ದು, ಕಿಡಿಗೇಡಿಗಳು ಬಾಗಿಲುಗಳನ್ನು ದ್ವಂಸ ಮಾಡಿದ್ದಾರೆ.


ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ವಾಣಿಜ್ಯ ಹಾಗೂ ಕಲಾ ವಿಭಾಗಗಳು ನಡೆಯುತ್ತಿವೆ. ಆದರೆ, ಕಟ್ಟಡದ ಕೊರತೆಯ ಕಾರಣ ಹೆಚ್ಚಿನ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿಲ್ಲದಾಗಿದೆ. ಈ ವಿಚಾರಗಳನ್ನು ಶಾಸಕರಿಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಹದಿನೈದು ದಿನಗಳ ಒಳಗೆ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು. ಹೆತ್ತೂರು ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.


ತಾಲೂಕು ಯುವರೈತಸಂಘದ ಅಧ್ಯಕ್ಷ ಡಿಲಾಕ್ಷ, ಮಧುಸೂದನ್, ಕಿಶೋರ್, ಕೀರ್ತಿಕುಮಾರ್, ವಿಜಯ್, ಮಧುಚಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net