

ಕಂಪ್ಲಿ: ಈ ವರ್ಷದ ಗೌರಿ ಹಬ್ಬವು ಸಕ್ಕರೆ ಆರತಿ ತಯಾರಕರಿಗೆ ಲಾಭ ತಂದುಕೊಟ್ಟಿದೆ. ನಿರೀಕ್ಷೆಗೂ ಮೀರಿ ಸಕ್ಕರೆ ಆರತಿಗಳು ಮಾರಾಟಗೊಂಡಿವೆ.
ನ.13ರಂದು 120 ರೂ.ಗೆ ಕೆಜಿಯಂತೆ ಸಕ್ಕರೆ ಆರತಿ ಮಾರಾಟ ಆರಂಭಗೊಂಡಿದ್ದು, ನ.14ರಂದು 150 ರೂ., ನ.15ರಂದು ಗೌರಿ ಹುಣ್ಣಿಮೆಯಂದು 250 ರೂ., ನ.16ರಂದು 250 ರೂ.ಯಿಂದ 300 ರೂ.ಗೆ ಕೆಜಿಯಂತೆ ಮಾರಾಟಗೊಂಡಿದೆ. ಭಾನುವಾರ ಕೊಂತಿ ರೊಟ್ಟಿಯಲ್ಲಿ ಗೌರಿ ಹಬ್ಬಕ್ಕೆ ಖರೀದಿಸಿದ್ದ ಸಕ್ಕರೆ ಆರತಿ ಬಳಕೆ ಮಾಡುವ ಕಾರಣ ದರ ದಿಢೀರ್ ಕುಸಿದು ಕೆಜಿಗೆ 100 ರೂ.ಗೆ ಮಾರಾಟಗೊಂಡಿತು.
ಗ್ರಾಮೀಣ ಜನರು ಸಕ್ಕರೆ ಆರತಿ ಖರೀದಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಸಕ್ಕರೆ ಆರತಿ ದರವೂ ಏರಿಕೆ ಕಂಡಿದೆ. ಪ್ರತಿ ವರ್ಷ 500 ಕ್ವಿಂಟಾಲ್‌ಗೂ ಹೆಚ್ಚು ಸಕ್ಕರೆ ಆರತಿ ಮಾರಾಟವಾಗುವುದುಂಟು. ಈ ಬಾರಿ 100 ಕ್ವಿಂಟಾಲ್ ಸಕ್ಕರೆ ಆರತಿ ಕಡಿಮೆ ಉತ್ಪಾದಿಸಿದ್ದರಿಂದ ದರ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.
ಸಕ್ಕರೆ ಆರತಿ ಮಾರಾಟದಲ್ಲಿ ಶೇ.100 ಲಾಭಗಳಿಸಲು ಸಾಧ್ಯವಿದ್ದು, ಮನೆ ಮಂದಿಯೊಂದಿಗೆ ಕಾರ್ಮಿಕರಿಗೂ ಉತ್ತಮ ಕೂಲಿ ಹಣ ದೊರೆತಿದೆ. ರೈತರು, ಜನರು ಸಹ ಉತ್ಸಾಹದಿಂದ ಆರತಿ ಕೊಂಡುಕೊಂಡಿದ್ದರಿಂದ ಈ ವರ್ಷ ಸಕ್ಕರೆ ಆರತಿ ತಯಾರಕರಿಗೆ ಉತ್ತಮ ಲಾಭವಾಗಿದೆ ಎಂದು ಸಕ್ಕರೆ ಆರತಿ ತಯಾರಕಿ ಕುದ್ರಿ ಸುಭದ್ರಮ್ಮ ತಿಳಿಸಿದರು.