

ಶಿವರಾಜ ಎಂ/ವೆಂಕಟರಾಜು.ಎಸ್ ಬೆಂಗಳೂರು ಗ್ರಾಮಾಂತರ
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ನೆರವು, ಆಪ್ತ ಸಮಾಲೋಚನೆ ಮತ್ತು ವಸತಿ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಸಖಿ (ಒನ್ ಸ್ಟಾಪ್ ಸೆಂಟರ್)ಕೇಂದ್ರದ ಸಿಬ್ಬಂದಿ ವೇತನವಿಲ್ಲದೆ ಪರದಾಡುವಂತಾಗಿದೆ.
ಸಖಿ ಕೇಂದ್ರದ ಉಪಯೋಗ ಪ್ರಮಾಣ ಪತ್ರಕ್ಕೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೇಂದ್ರ ಕಚೇರಿಯ ಲೆಕ್ಕ ಪತ್ರ ವಿಭಾಗದ ಲೆಕ್ಕಕ್ಕೂ ಮಿಸ್‌ಮ್ಯಾಚ್ ಆಗುತ್ತಿದೆ ಎಂಬ ಕಾರಣ ನೀಡುತ್ತಿರುವ ಸರ್ಕಾರ ನಿರ್ಭಯಾ ಯೋಜನೆಯಡಿ ಹಣ ಬಿಡುಗಡೆಗೆ ಇಂದು ನಾಳೆ ಎಂದು ಸತಾಯಿಸುತ್ತಿದೆ.
ವರ್ಷವಾದರೂ ವೇತನವಿಲ್ಲ:
ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸಖಿ ಒನ್ ಸ್ಟಾಪ್ ಕೇಂದ್ರ ಸೇವಾನಿರತವಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿನ ಸಖಿ ಕೇಂದ್ರದ ಸಿಬ್ಬಂದಿಗೆ ವರ್ಷಗಟ್ಟಲೆ ವೇತನ ನಿಲುಗಡೆ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಐದಾರು ತಿಂಗಳ ವೇತನ ಪಾವತಿಯಾಗಿಲ್ಲ ಎಂಬ ದೂರು ವ್ಯಕ್ತವಾಗಿದ್ದು, ಸಿಬ್ಬಂದಿ ವೇತನವಿಲ್ಲದೆ ಹತಾಶರಾಗಿದ್ದಾರೆ.
ಕೇಂದ್ರ ಸಚಿವರಿಗೆ ಮನವಿ:
ರಾಜ್ಯದ ಅಷ್ಟೂ ಜಿಲ್ಲೆಯ ಸಖಿ ಒನ್ ಸ್ಟಾಪ್ ಕೇಂದ್ರ ಸಿಬ್ಬಂದಿ ಮೌನ ಪ್ರತಿಭಟನೆ ಮೂಲಕ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ. ಪ್ರತೀ ಸಖಿ ಕೇಂದ್ರದಲ್ಲಿ ಸೆಂಟರ್ ಅಡ್ಮಿನಿಸ್ಟ್ರೇಟರ್, ಆಪ್ತ ಸಮಾಲೋಚಕಿ, ಇಬ್ಬರು ಕಾನೂನು ಸಮಾಲೋಚಕರು, ಇಬ್ಬರು ಡಿ ಗ್ರೂಪ್ ಸಿಬ್ಬಂದಿ ಸೇರಿ 8 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಷ್ಟೂ ಸಿಬ್ಬಂದಿ ವೇತನವಿಲ್ಲದೆ ಕಂಗಲಾಗಿದ್ದಾರೆ. ಅದರಲ್ಲೂ ಸ್ವಚ್ಛತೆ ಹಾಗೂ ಸಹಾಯಕರಾಗಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು ತೀವ್ರ ಹತಾಶರಾಗಿದ್ದು, ಪ್ರತಿದಿನ ಸಖಿ ಕೇಂದ್ರ ಹಿರಿಯ ಅಧಿಕಾರಿಗಳ ಮೇಲೆ ಸಂಬಳಕ್ಕಾಗಿ ಒತ್ತಡ ಹೇರುತ್ತಿದ್ದಾರೆ. ಅವರನ್ನು ಸಂತೈಸಿ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳು ಬೆವರು ಹರಿಸುವಂತಾಗಿದೆ.
ವಿದ್ಯುತ್, ದೂರವಾಣಿ ಬಿಲ್‌ಗೂ ಕೊಕ್ಕೆ:
ಇನ್ನೂ ಸಖಿ ಕೇಂದ್ರಗಳ ವಿದ್ಯುತ್ ಹಾಗೂ ದೂರವಾಣಿ ಬಿಲ್‌ಗಳನ್ನು ಪಾವತಿಸಲು ಹಣ ನೀಡದ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಕೇಂದ್ರಗಳಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿದೆ ಎನ್ನಲಾಗಿದೆ. ಇನ್ನು ಹಲವು ಕೇಂದ್ರಗಳಲ್ಲಿ ಸಿಬ್ಬಂದಿ ಬೆಸ್ಕಾಂ ಹಾಗೂ ದೂರವಾಣಿ ಸಿಬ್ಬಂದಿಯವರಿಗೆ ಮನವಿ ಮಾಡಿ ಸಂಪರ್ಕ ಕಡಿತಗೊಳ್ಳದಂತೆ ಕಾಪಾಡಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ.
ಸಂತ್ರಸ್ತರ ವೆಚ್ಚಕ್ಕೂ ಸ್ವಂತ ಖರ್ಚು:
ಬಾಲ್ಯವಿವಾಹ, ಅತ್ಯಾಚಾರ ಸೇರಿ ವಿವಿಧ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆಸರೆ ನೀಡುವ ಸಖಿ ಕೇಂದ್ರದಲ್ಲಿ ಸಂತ್ರಸ್ತೆಯರ ಊಟೋಪಚಾರ ಸೇರಿ ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಸಿಬ್ಬಂದಿಯೇ ಸ್ವಂತ ಖರ್ಚು ಮಾಡಿ ದಿನದೂಡುತ್ತಿದ್ದಾರೆ. ಅತ್ತ ಕಡೆ ಸಂಬಳವೂ ಇಲ್ಲದೆ ಇತ್ತ ಸಂತ್ರಸ್ತರ ಖರ್ಚನ್ನು ಭರಿಸಬೇಕಾದ ಸಂಕಷ್ಟ ಸ್ಥಿತಿಗೆ ತಲುಪಿರುವ ಸಿಬ್ಬಂದಿ ಸಂಬಳಕ್ಕಾಗಿ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.
ಕೆಲಸದ ಭದ್ರತೆಯೂ ಇಲ್ಲ: ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಸಖಿ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದಲೇ ಅನುದಾನ ಬಿಡುಗಡೆಯಾಗಬೇಕಿದೆ. ರಾಜ್ಯದಲ್ಲಿ ಆಯಾ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಜವಾಬ್ದಾರಿ ಹೊತ್ತಿದ್ದು, ಸಂಬಳ ಕೇಳಿದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಇದರಿಂದ ಅಡಕತ್ತರಿಯಲ್ಲಿ ಸಿಕ್ಕಿರುವ ಸಿಬ್ಬಂದಿ ದಿಕ್ಕುಕಾಣದಂತಾಗಿದ್ದಾರೆ.
ಸಖಿ ಕೇಂದ್ರದ ಪ್ರಮುಖ ಸೇವೆಗಳು:
*ಅತ್ಯಾಚಾರ ಮತ್ತು ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ತುರ್ತು ಚಿಕಿತ್ಸೆ ನೀಡುವುದು
*ನೊಂದ ಮಹಿಳೆಯರು ಪೊಲೀಸ್ ಮತ್ತು ನ್ಯಾಯಾಲಯದಲ್ಲಿ ದೂರು ದಾಖಲಿಸುವ ‘ವಿಡಿಯೋ ಕಾನ್ಪರೆನ್ಸ್ ಸೌಲಭ್ಯ’
*181 ಸಹಾಯವಾಣಿ ಸೌಲಭ್ಯ
*ವೈದ್ಯಕೀಯ, ಕಾನೂನು ಸಮಾಲೋಚನೆ ಹಾಗೂ ತಾತ್ಕಾಲಿಕ ಆಸರೆ