ರೈತರ ಮನೆಗೆ ಬಾಗಿಲಿಗೆ ಸಖಿಯರು

HYR kvk krushi work shop 12
Published on

ಹಿರಿಯೂರು: ಕೃಷಿ ಕ್ಷೇತ್ರದ ಪುನಶ್ಚೇತನಕ್ಕೆ ರೈತರಿಗೆ ಸೌಲಭ್ಯ ಸೇರಿ ವಿವಿಧ ಮಾಹಿತಿಗಳನ್ನು ಸಕಾಲದಲ್ಲಿ ತಲುಪಿಸುವ ಹೊಣೆಗಾರಿಕೆ ಕೃಷಿ ಸಖಿಯರು ನಿರ್ವಹಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಒ.ಕುಮಾರ್ ಹೇಳಿದರು.

ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಜೀವನೋಪಾಯ-ಕೃಷಿ ಸಖಿಯರಿಗೆ ಆರು ದಿನಗಳ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿಗೆ ಒಬ್ಬ ಕೃಷಿ ಸಖಿಯರನ್ನು ನೇಮಿಸಲಾಗಿದೆ. ಅನ್ನದಾತರ ಮನೆ ಬಾಗಿಲಿಗೆ ತೆರಳಿ ಕೃಷಿ-ಪಶು ಸಂಗೋಪನಾ, ತೋಟಗಾರಿಕೆ ಇಲಾಖೆಯಿಂದ ಜಾರಿಗೊಳಿಸಲಾಗುವ ಯೋಜನೆ, ಅವುಗಳ ಸದುಪಯೋಗ, ಸ್ಮಾರ್ಟ್ ಕೃಷಿ, ಮಿಶ್ರ ಬೇಸಾಯ, ಹನಿ ನೀರಾವರಿ, ಮಣ್ಣಿನ ಸಂರಕ್ಷಣೆ, ಫಲವತ್ತತೆ ಕಾಪಾಡುವುದು, ಆಧುನಿಕ ಕೃಷಿ ಪದ್ಧತಿ ಕುರಿತು ಸಖಿಯರು ಸಲಹೆ ನೀಡಲಿದ್ದಾರೆ ಎಂದರು.

ಸಿಬ್ಬಂದಿ ಕೊರತೆ ನೀಗಿಸಲು ಕೃಷಿ ಸಖಿಗಳನ್ನು ಬಳಸಿಕೊಳ್ಳುವುದರಿಂದ ಗ್ರಾಮ ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡಲು ಹಾಗೂ ಇಲಾಖೆಯ ಜತೆಗೆ ಕಾರ್ಯನಿರ್ವಹಿಸಲು ಕೃಷಿ ವಿವಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ, ಹಳ್ಳಿಗೆ ಒಬ್ಬರಂತೆ ಗ್ರಾಮ ಸೇವಕರನ್ನು ನೇಮಕ ಮಾಡಿ ಗ್ರಾಮ ಮಟ್ಟದಲ್ಲಿ ಕೃಷಿ ಸಂಬಂಧಿತ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಆದರೆ, ಇತ್ತಿಚಿನ ದಿನಗಳಲ್ಲಿ ಗ್ರಾಮ ಸೇವಕರು ಇಲ್ಲದ ಕಾರಣ ಸರ್ಕಾರ ಕೃಷಿ ಸಖಿಯರ ಮುಖಾಂತರ ಈ ಕೆಲಸವನ್ನು ನಡೆಸಲು ಯೋಜನೆ ರೂಪಿಸಿದೆ ಎಂದರು.

ಆಯ್ಕೆಯಾಗಿರುವ ಕೃಷಿ ಸಖಿಯರಿಗೆ ಕೃಷಿ ಹಾಗೂ ಸಂಬಂಧಿತ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲು 54 ದಿನಗಳ ತರಬೇತಿಯನ್ನು ಆಯೋಜಿಸಲಾಗಿದ್ದು, ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಮುಂತಾದ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.

ವಿವಿಧ ಬಗೆಯ ಹೊಸ ತಳಿಗಳು, ಕೀಟ ಮತ್ತು ರೋಗ ನಿರ್ವಹಣೆ, ಮಾರುಕಟ್ಟೆ, ಮಣ್ಣು ವಿಜ್ಞಾನ, ಮೌಲ್ಯವರ್ಧನೆ ಮುಂತಾದ ಅಂಶಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ ಮಾತನಾಡಿ, ಸಮಗ್ರ ಮಾಹಿತಿಯನ್ನು ರೈತ ಸಮುದಾಯಕ್ಕೆ ತಲುಪಿಸುವಲ್ಲಿ ಕೃಷಿ ಸಖಿಯರು ಸೇತುವೆಯಂತೆ ಕೆಲಸ ಮಾಡಬೇಕಾಗಿದೆ ಎಂದರು.

ತಾಪಂ ಇಒ ಶಿವಪ್ರಕಾಶ್, ಹಿರಿಯ ವಿಜ್ಞಾನಿ ಡಾ.ಓಂಕಾರಪ್ಪ, ಡಾ. ಪ್ರಕಾಶ್, ಗೀತಾ ಕುಮಾರಿ, ಗಾಯತ್ರಿ, ಹರ್ಷ, ಪ್ರಶಾಂತ್, ಪ್ರಾರ್ಥನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net