ಸಖಿ ಸುರಕ್ಷಾ ಯೋಜನೆ ಸಿಆರ್‌ಎಸ್ ಚಾಲನೆ: ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ವಿತರಿಸುವ ಮಹತ್ವದ ಕಾರ್ಯಕ್ರಮ

Sakhi Suraksha Yojana launched Mandya
Published on

ಮಂಡ್ಯ: ಜಿಲ್ಲಾ ಪಂಚಾಯಿತಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ‘ಸಖಿ ಸುರಕ್ಷಾ’ ಎಂಬ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ 10 ಜನ ಆಶಾ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ ಮುಟ್ಟಿನ ಕಪ್ ವಿತರಿಸಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಅನುದಾನದಡಿ 2,200 ಮುಟ್ಟಿನ ಕಪ್‌ಗಳು ಜಿಲ್ಲೆಗೆ ಬಂದಿದೆ. ತಜ್ಞ ವೈದ್ಯರ ಸಲಹೆಯಂತೆ ಪ್ರಾಥಮಿಕ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.

ಆಶಾ ಕಾರ್ಯಕರ್ತೆಯರು ಮುಟ್ಟಿನ ಕಪ್ ಬಳಕೆಯ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ. ನಂತರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಶಾಲೆಯ ಮಹಿಳಾ ಸಿಬ್ಬಂದಿ, ಗ್ರಾಪಂ ಸದಸ್ಯೆಯರು ಹಾಗೂ ಸಿಬ್ಬಂದಿ, ಎನ್‌ಆರ್‌ಎಲ್ಎಂ ಯೋಜನೆಯ ಕೃಷಿ ಹಾಗೂ ಪಶು ಸಖಿಯರು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಿಬ್ಬಂದಿ, ಶಾಲೆ ಹಾಗೂ ಹಾಸ್ಟೆಲ್ ವಾರ್ಡನ್‌ಗಳಿಗೆ ವಿತರಿಸಲು ಉದ್ದೇಶಿಸಲಾಗಿದೆ. ಇದಾದ ಬಳಿಕ ಪದವಿ, ಪಿಯು, ಐಟಿಐ ಕಾಲೇಜು ಹಾಗೂ ಎಸ್‌ಎಸ್‌ಎಲ್ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಯೋಜನೆ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಟ್ ಫೋರ್ಸ್ ಸಮಿತಿ ರಚಿಸಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಿತಿಯಲ್ಲಿರುತ್ತಾರೆ. ಈ ಸಮಿತಿ ಮುಟ್ಟಿನ ಕಪ್ ಬಳಕೆ ಕುರಿತು ಅರಿವು ಮೂಡಿಸುವುದು, ವಿತರಣೆ ಹಾಗೂ ಬಳಕೆ ಕುರಿತು ನಿರಂತರ ಅನುಸರಣೆಗೆ ಕ್ರಮ ವಹಿಸಲಿದೆ. ಜಿಲ್ಲೆಯ ಏಳು ತಾಲೂಕಿನಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಲಾಗಿದೆ. ಅಂತೆಯೇ ಮುಂದಿನ ಸ್ವಾತಂತ್ರ್ಯ ದಿನಾಚರಣೆಯೊಳಗೆ ಜಿಲ್ಲೆಯಲ್ಲಿನ 25 ರಿಂದ 45 ವರ್ಷ ವಯೋಮಿತಿಯ ಮಹಿಳೆಯರಿಗೆ ಸಿಎಸ್‌ಆರ್ ಅನುದಾನದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net