

ತುಮಕೂರು : ಒಬ್ಬರು ಕಾಲು ನೀಡಿಕೊಳ್ಳಲೂ ಅವಕಾಶವಿಲ್ಲದ ಸ್ಥಳದಲ್ಲಿ ಹಿರಿಯ ಜೀವ ಬದುಕು ಸವೆಸುತ್ತಿದೆ. ಜೀವನದ ಸಂಧ್ಯಾಕಾಲದಲ್ಲಿ ಯಾರೊಬ್ಬರ ಆಸರೆಯೂ ಇಲ್ಲದಿರುವ ಅನಾಥೆಯ ವೃದ್ಧಾಪ್ಯ ವೇತನಕ್ಕೂ ಕಂದಾಯ ಇಲಾಖೆ ಕೊಕ್ಕೆ ಹಾಕಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಕೆರೆ ಅಂಗಳದ ತಿಪ್ಪೇಗುಂಡಿಯಲ್ಲಿ 5/5 ಅಳತೆಯ ಶೆಡ್‌ನಲ್ಲಿ ಜೀವಿಸುತ್ತಿರುವ 65 ವರ್ಷದ ವೃದ್ಧೆ ‘ಸಾಕಮ್ಮ’ ಉಪವಾಸದಿಂದ ಬಳಲುತ್ತಿದ್ದಾರೆ.
ಹೊಸದುರ್ಗ ತಾಲೂಕು ಗರಗದಲ್ಲಿ ವಿವಾಹವಾಗಿದ್ದ ಸಾಕಮ್ಮಗಂಡನನ್ನು ಕಳೆದುಕೊಂಡ ನಂತರ ತವರು ಹಂದನಕೆರೆ ಸೇರಿದರು. ಅಲ್ಲಿಯೂ ಆಸ್ತಿ, ಮನೆ ಇಲ್ಲದೆ ಅನಾಥಳಾದ ವೃದ್ಧೆ ಗಣಪತಿ ದೇವಾಲಯದಲ್ಲಿ ಇಷ್ಟು ವರ್ಷ ಇದ್ದರು. ಈಗ ಕೆರೆ ಅಂಗಳದಲ್ಲಿ ಸಣ್ಣ ಗೂಡಿನಲ್ಲಿದ್ದು, ವಿಪರೀತ ಚಳಿ ಆಕೆಯನ್ನು ಹೈರಾಣಾಗಿಸಿದೆ. ಕೆವೈಸಿ ಕಾರಣಕ್ಕೆ ನಿಂತು ಹೋಗಿದ್ದ ಪಡಿತರ ಸಿಗುವಂತೆ ಸ್ಥಳೀಯರು ಇತ್ತೀಚೆಗಷ್ಟೇ ಸರಿಪಡಿಸಿ ಅಕ್ಕಿ ಸಿಗುವಂತೆ ಮಾಡಿರುವುದು ಆಕೆಯ ಜೀವ ಉಳಿಸಿದೆ.
ವೃದ್ಧಾಪ್ಯ ವೇತನಕ್ಕೂ ಕಂದಾಯ ಇಲಾಖೆ ಕೊಕ್ಕೆ: ವೃದ್ಧಾಪ್ಯ ವೇತನ ಕೂಡ ಸಾಕಷ್ಟು ತಿಂಗಳಿಂದ ಸಾಕಮ್ಮನ ಕೈಗೆ ತಲುಪುತ್ತಿಲ್ಲ. ಹಾಗಾಗಿ, ದಿನನಿತ್ಯದ ಊಟಕ್ಕೂ ಈ ಹಿರಿಯ ಜೀವ ಪರದಾಡುತ್ತಿದೆ. ಮೂರು ತಿಂಗಳಿನಿಂದ ವೃದ್ಧಾಪ್ಯ ವೇತನಕ್ಕಾಗಿ ಸಾಕಮ್ಮ ಅಲೆದು ಸುಸ್ತಾಗಿದ್ದಾರೆ. ಆದರೂ, ಅಧಿಕಾರಿಗಳ ಕರುಳು ಕರಗಿಲ್ಲ, ಇದೇ ಓಡಾಟದಲ್ಲಿ ಆಕೆಯ ಆರೋಗ್ಯ ಕೂಡ ಹದಗೆಟ್ಟಿದ್ದು, ಚಿಕಿತ್ಸೆ ಅಗತ್ಯವಿದೆ, ಈಗಾಗಲೇ ಕಿವಿ ಕೂಡ ಕೇಳಿಸದಂತಾಗಿದ್ದು ಕಣ್ಣುಗಳೂ ಮಂಜಾಗಿದೆ.
‘ಸಾಕಮ್ಮ’ನ ಶೆಡ್‌ನಲ್ಲಿ ಮಲಗಲಷ್ಟೇ ಜಾಗ " ಅವರಿವರ ಮನೆಯಿಂದ ತಂದ ಹಳೆಯ ಬಟ್ಟೆಗಳಿಂದ ಮುಚ್ಚಿರುವ ಶೆಡ್‌ನಲ್ಲಿ ಸಾಕಮ್ಮ ವಾಸಿಸುತ್ತಿರುವುದೇ ಒಂದು ಸೋಜಿಗ. ಈ ಶೆಡ್ ಕೆರೆ ಅಂಗಳದ ತಿಪ್ಪೇಗುಂಡಿಯಲ್ಲಿದ್ದು ಒಳಗೆ ಒಬ್ಬರು ಕಾಲು ಮುದುರಿಕೊಂಡು ಮಲಗಲಷ್ಟೇ ಅವಕಾಶವಿದೆ. ಮಳೆಗೆ ಕೆರೆ ತುಂಬಿದ್ದು ಮೈಕೊರೆಯುವ ಚಳಿಗೆ ವೃದ್ಧೆ ಕಮರಿದ್ದಾರೆ.
ನಮ್ಮೂರಲೇ ಇರಬೇಕು, ಬದುಕಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದೆ, ಊರಲ್ಲಿ ಯಾರಾದರೂ ಕೊಟ್ಟರಷ್ಟೇ ಅವತ್ತಿನ ಊಟ. ಸರ್ಕಾರದಿಂದ ಬರುತ್ತಿದ್ದ ಹಣವೂ ನಿಂತು ಹೋಗಿದೆ. ಅದನ್ನಾದ್ರು ಕೊಟ್ರೆ ಹೆಂಗೊ ಜೀವನ ಮಾಡ್ತೀನಿ. ಸಾಕಮ್ಮ ನಿರಾಶ್ರಿತ ವೃದ್ಧೆ ಹಿರಿಯ ಜೀವ ಮನೆ ಇಲ್ಲದೆ ಗೂಡಿನಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ, ಅವರಿಗೆ ಆಶ್ರಯ ನೀಡಲು ನಮ್ಮ ಇಲಾಖೆ ವತಿಯಿಂದ ಸಾಧ್ಯವಿದೆ. ಸ್ಥಳೀಯರೊಂದಿಗೆ ಮಾತನಾಡಿ ಸೌಲಭ್ಯ ಕಲ್ಪಿಸುತ್ತೇನೆ. ರಮೇಶ್, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ, ತುಮಕೂರು.