ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಅಭಿವೃದ್ಧಿಗಾಗಿ 2.65 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕ್ರಾಫರ್ಡ್ ಆಸ್ಪತ್ರೆ ಅವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮುಖ್ಯವಾಗಿ ಮಳೆ ನೀರು ಸೋರುವಿಕೆ ತಡೆಗಟ್ಟುವುದು ಹಾಗೂ ವಿದ್ಯುತ್ ಲೈನ್ ರಿಪೇರಿ ಮಾಡಿಸಲು ಈ ಅನುದಾನ ಬಳಸಲು ಚಿಂತನೆ ನಡೆಸಲಾಗಿದೆ ಎಂದರು. ಆಸ್ಪತ್ರೆಯಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಎಲ್ಲವನ್ನೂ ಕಾರ್ಯರೂಪಕ್ಕೆ ತರಲು ಅಧಿಕಾರಿಗಳು ಶ್ರಮಿಸಬೇಕು ಎಂದರು. ಉಚಿತ ಸೇವೆ: ವೈದ್ಯಾಧಿಕಾರಿ ಮಹೇಶ್ ಮಾತನಾಡಿ, ಆಸ್ಪತ್ರೆಯ ನಗುಮೊಗು ಅಂಬುಲೆನ್ಸ್‌ನ ಸೇವೆ ಉಚಿತವಾಗಿ ನೀಡಲಾಗುತ್ತಿದೆ. 108 ಅಂಬುಲೆನ್ಸ್ ಸೇವೆಗೆ ಕಿ.ಮೀ.ಗೆ 4 ರೂ. ದರ ವಿಧಿಸಲಾಗುತ್ತಿದೆ ಎಂದು ವಿವರಿಸಿದರು. ನಾಯಿಗಳ ಹಾವಳಿ: ಆಸ್ಪತ್ರೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆಸ್ಪತ್ರೆಯ ಒಳ ರೋಗಿಗಳ ಕೊಠಡಿಗೇ ಬಂದು ಮಲಗುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು ಸಾರ್ ಎಂದು ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸಂಧ್ಯಾ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು, ನಾಯಿ ಹಾವಳಿ ತಪ್ಪಿಸಲು ಶೀಘ್ರವೇ ಕಾವಲುಗಾರರನ್ನು ನೇಮಕ ಮಾಡಲಾಗುವುದು ಎಂದರು.