

ಸಕಲೇಶಪುರ : ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಕೃತ್ಯವನ್ನು ಎಸಗುತ್ತಿರುವ ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಗೃಹ ಇಲಾಖೆ ಮುಂದಾಗಬೇಕು ಎಂದು ಹಿಂದುಪರ ಸಂಘಟನೆಗಳ ವತಿಯಿಂದ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ (ಜೂ. 9ರಂದು) ಜಮ್ಮು- ಕಾಶ್ಮೀರದ ಶಿವಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಾರ್ಥಿಗಳ ಬಸ್ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದರು. ಬಸ್ ಕಂದಕಕ್ಕೆ ಬಿದ್ದರೂ 20 ನಿಮಿಷಗಳ ಕಾಲ ಗುಂಡು ಹಾರಿಸಿ ಪೈಶಾಚಿಕ ಕೃತ್ಯ ಮೆರೆದು ಮಕ್ಕಳು, ಮಹಿಳೆಯರು ಸೇರಿ 10ಭಕ್ತರನ್ನು ಬಲಿ ಪಡೆದರು. ಇದು ಭಯೋತ್ಪಾದಕ ಸಂಘಟನೆಗಳ ಕೃತ್ಯವಾಗಿದ್ದು, ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆಗಳ ಕೈವಾಡ ಇಲ್ಲಿದೆ ಎಂದರು.
ಭಯೋತ್ಪಾದಕರ ದಾಳಿಯಿಂದ ಜಮ್ಮು- ಕಾಶ್ಮೀರದ ಹಿಂದುಗಳು ಹಲವು ದಶಕದಿಂದ ತತ್ತರಿಸಿ ಹೋಗಿದ್ದಾರೆ. ಇನ್ನಷ್ಟು ನರಮೇಧ ನಡೆಸಲು ಭಯೋತ್ಪಾದನಾ ತರಬೇತಿಗಳು ಕಣಿವೆ ರಾಜ್ಯದ ಅಲ್ಲಲ್ಲಿ ನಡೆಯುತ್ತಿವೆ. ಶಿವಭಕ್ತರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಹಿಂದು ಪರ ಸಂಘಟನೆಗಳ ಮುಖಂಡರುಗಳಾದ ರಘು ಸಕಲೇಶಪುರ, ಕೌಶಿಕ್, ಮಂಜುನಾಥ್ ಕಬ್ಬಿನ ಗದ್ದೆ, ನಡಹಳ್ಳಿ ಶಶಿ, ಸುರೇಂದ್ರ, ಶ್ರೀಜಿತ್ ಇತರರಿದ್ದರು.