ಭ್ರಷ್ಟಾಚಾರ ನಿಯಂತ್ರಣಕ್ಕೆ ಸಕಾಲ ಸಹಕಾರಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

sakala awareness workshop
Published on

ಮಂಡ್ಯ: ಜನಸಾಮಾನ್ಯರಿಗೆ ನಿರ್ದಿಷ್ಟ ಸಮಯದಲ್ಲಿ ಸರ್ಕಾರಿ ಸೇವೆಯನ್ನು ನೀಡುವುದರ ಜತೆಗೆ ಭ್ರಷ್ಟಾಚಾರ ನಿಯಂತ್ರಿಸಲು ಸಹಕಾರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-2011 ಮತ್ತು (ತಿದ್ದುಪಡಿ) ಅಧಿನಿಯಮ-2014 ಸಕಾಲ ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ನಾಳೆ ಇನಿಲ್ಲ, ಹೇಳಿದ ಸಮಯಕ್ಕೆ ತಪೊಲ್ಲ ಎಂಬುದು ಸಕಾಲ ಕಾಯ್ದೆಯ ಉದ್ದೇಶವಾಗಿದೆ ಎಂದರು.

ಪ್ರಾರಂಭದಲ್ಲಿ ಕರ್ನಾಟಕ ಸೇವೆಗಳ ಖಾತ್ರಿ ಕಾಯ್ದೆ ಎಂದು ಇತ್ತು. ನಂತರದಲ್ಲಿ ಸಕಾಲ ಕಾಯ್ದೆ ಎಂದು ಮರುನಾಮಕರಣ ಮಾಡಲಾಯಿತು. ಸರ್ಕಾರ ಸಾರ್ವಜನಿಕರಿಗೆ ನೀಡುವ ಸೇವೆಗಳನ್ನು ಗ್ಯಾರಂಟಿಯಾಗಿ ನಿಗದಿತ ಸಮಯದಲ್ಲಿ ನಿಶ್ಚಿತ ಅಧಿಕಾರಿ ನೀಡಬೇಕು. ನಿಗದಿತ ಸಮಯದಲ್ಲಿ ಅರ್ಜಿದಾರನಿಗೆ ಸೇವೆ ನೀಡಲು ವಿಫಲವಾದರೆ ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ಹಾಕಿದರೆ ಆ ವ್ಯಕ್ತಿಯು ಅರ್ಜಿದಾರನಿಗೆ ಎಷ್ಟು ದಿನ ವಿಳಂಬ ಮಾಡಿದ್ದಾನೆ ಎಂದು ಪರಿಗಣಿಸಿ ಪ್ರತಿದಿನಕ್ಕೆ 20 ರೂನಂತೆ ಗರಿಷ್ಠ 500 ರೂವರಿಗೆ ದಂಡ ವಿಧಿಸಲಾಗುವುದು ಎಂದರು.

ಹಿಂದಿನ 10 ವರ್ಷದಿಂದ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿ ಪ್ರಸ್ತುತ ದಿನಗಳಲ್ಲಿ 100 ಇಲಾಖೆಗಳನ್ನೊಳಗೊಂಡ 1,181 ಸೇವೆಗಳು ಸಕಾಲ ಯೋಜನೆಯಡಿ ಆನ್‌ಲೈನ್ ಮುಖಾಂತರ ದೊರೆಯುತ್ತದೆ. ಆದರೂ ಇನ್ನು ಕೆಲವು ಜನಸಾಮಾನ್ಯರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಅವರಿಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ಜಿಲ್ಲಾ ಆಶಾ ಮೇಲ್ವಿಚಾರಕಿ ಸುಮತಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸುನಿಲ್ಕುಮಾರ್, ಎಸ್.ಪ್ರಕಾಶ್, ವಿನಯ್, ರಚಿತ್, ಸಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net