ಹೈದರಾಬಾದ ಪೊಲೀಸ್​ ಆಯುಕ್ತರಾಗಿ ಹುಬ್ಬಳ್ಳಿಯ ಸಜ್ಜನರ ನೇಮಕ

IMG-20250927-WA0011.jpg
Published on

ಹುಬ್ಬಳ್ಳಿ: ನಗರ ಮೂಲದ 1996ನೇ ಬ್ಯಾಚ್ ಐಪಿಎಸ್ ಅಧಿಕಾರಿ, ಸೂಪರ್ ಕಾಪ್ ಎಂದೇ ಖ್ಯಾತರಾದ ವಿಶ್ವನಾಥ ಚನ್ನಪ್ಪ ಸಜ್ಜನರ ಅವರನ್ನು ಹೈದರಾಬಾದ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ.

ಅವರು ಆಂಧ್ರಪ್ರದೇಶ ಕೇಡರ್ ಗೆ ಸೇರಿದ್ದು, ಆ ರಾಜ್ಯ ವಿಭಜನೆಯ ನಂತರ ತೆಲಂಗಾಣ ಕೇಡರ್ ಗೆ ವರ್ಗಾವಣೆಯಾಗಿದ್ದರು.

ಗದಗ ಜಿಲ್ಲೆಯ ಅಸೂಟಿಯವರಾದ ವಿಶ್ವನಾಥ ಅವರ ತಂದೆ ಸಿ.ಬಿ. ಸಜ್ಜನರ ಮತ್ತು ತಾಯಿ ಗಿರೀಜಾ ಸಜ್ಜನರ. ಹುಬ್ಬಳಿಯ ಜೆ.ಜಿ. ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ವಿಶ್ವನಾಥ ಅವರು ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೌಸಾಳಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದರು.

ಐಪಿಎಸ್ ಪರೀಕ್ಷೆ ತೇರ್ಗಡೆ ಹೊಂದಿದ ಬಳಿಕ, ಪೊಲೀಸ್ ಸೇವೆಯ ಆರಂಭದಲ್ಲಿ ಅವರು ಜನಗಾಂವ್ ವಾರಂಗಲ್ ಜಿಲ್ಲೆ ಮತ್ತು ಪುಲಿವೆಂದಲ, ಕಡಪ ಜಿಲ್ಲೆಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ಎಎಸ್ಪಿ) ಕಾರ್ಯ ನಿರ್ವಹಿಸಿದರು. ನಂತರ ನಲ್ಗೊಂಡ, ಕಡಪ, ಗುಂಟೂರು, ವಾರಂಗಲ್ ಮತ್ತು ಮೇದಕ್ ಜಿಲ್ಲೆಗಳ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯಾಗಿ (ಎಸ್ಪಿ), ಸಿಐಡಿ ಆರ್ಥಿಕ ಅಪರಾಧಗಳ ವಿಭಾಗ ವಿಭಾಗ ಹಾಗೂ ಆಕ್ಟೋಪಸ್ (ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಪಡೆ) ಎಸ್ಪಿಯಾಗಿ ಕಾರ್ಯ ನಿರ್ವಹಿಸಿದರು. ಆಂಧ್ರಪ್ರದೇಶ ವಿಶೇಷ ಪೊಲೀಸ್ (ಎಪಿಎಸ್ಪಿ) ಮಂಗಳಗಿರಿಯ ಕಮಾಂಡಂಟ್ ಆಗಿಯೂ ಕೆಲಸ ಮಾಡಿದ್ದಾರೆ.

ಆನಂತರ ಡಿಐಜಿ ಹಾಗೂ ಐಜಿ ಹುದ್ದೆಗಳಿಗೆ ಬಡ್ತಿ ಪಡೆದು ಮಾರ್ಚ್ 2018ರ ವರೆಗೆ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಮಾರ್ಚ್ 2018ರಿಂದ ಆಗಸ್ಟ್ 2021ರ ವರೆಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದರು.

ವಿಶೇಷ ಗುಪ್ತಚರ ಶಾಖೆಯ ಡಿಐಜಿ ಮತ್ತು ಇನ್ಸಪೆಕ್ಟರ್ ಜನರಲ್ ಆಗಿ ಮಾವೋವಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಜ್ಜನರ ಅವರು "ಎನ್ ಕೌಂಟರ್ ಸ್ಪೆಷಲಿಸ್ಟ್' ಎಂದೇ ಹೆಸರು ಪಡೆದಿದ್ದಾರೆ.

2019ರ ನವೆಂಬರ್ 29ರಂದು ಹೈದರಾಬಾದ್ ಹೊರವಲಯದಲ್ಲಿ ಪ್ರಿಯಾಂಕಾ ಎಂಬ ಪಶುವೈದ್ಯೆಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ಮಹಜರು ವೇಳೆ ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿತ್ತು. ಆಗ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿ ಸಜ್ಜನರ ಕಾರ್ಯನಿರ್ವಹಿಸಿದ್ದರು.

2021ರಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್ಆರ್ ಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಎರಡು ತೆಲುಗು ರಾಜ್ಯಗಳಾಗಿ (ತೆಲಂಗಾಣ ಮತ್ತು ಆಂಧ್ರಪ್ರದೇಶ) ವಿಭಜನೆಯಾದ ನಂತರ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿತ್ತು. ಅಂದಿನ ಸರ್ಕಾರ ಸಜ್ಜನರ ಅವರನ್ನು ಆರ್ ಟಿಸಿ ಎಂಡಿಯಾಗಿ ನೇಮಿಸಿತ್ತು. ಈಗ ರಸ್ತೆ ಸಾರಿಗೆ ಸಂಸ್ಥೆ ಲಾಭದ ಹಾದಿಯಲ್ಲಿ ಸಾಗುತ್ತಿದೆ.

ಇದೀಗ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ವಿ.ಸಿ. ಸಜ್ಜನರ, ನಗರದ ಕಾನೂನು -ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net