

ಸೊರಬ: ನಾಡಿಗೆ ಕೊಡುಗೆ ನೀಡಿದ ಸಂತ-ಮಹನೀಯರನ್ನು ಗೌರವಿಸುವ ಜತೆಗೆ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಂಸ್ಕಾರವಂತರಾಗಬೇಕಿದೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಸಂಸ್ಥಾನ ಮಠ ಜಡೆ, ತಾಲೂಕು ಕಸಾಪ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 175ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ದತ್ತಿ ಉಪಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದಾನಿಗಳ ಸಹಕಾರದಲ್ಲಿ ಶೀಘ್ರ ಮಠದ ಆವರಣದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪಿಸಲಾಗುವುದು ಎಂದರು.
ದಂತ ವೈದ್ಯ ಡಾ. ಜ್ಞಾನೇಶ್ ಅನುಭವ ಮಂಟಪ ಮತ್ತು ಪ್ರಸ್ತುತತೆ ಬಗ್ಗೆ ಉಪನ್ಯಾಸ ನೀಡಿ, ಬಸವಾದಿ ಪ್ರಮುಖರ ಮುಂಚೆಯೇ ಶರಣ ತತ್ವವಿತ್ತು. ಆ ಶರಣತತ್ವಕ್ಕೆ ಒತ್ತು ನೀಡಿದ್ದಲ್ಲದೆ ಸಮಾನತೆ ಆಶಯದಲ್ಲಿ ಬಸವಣ್ಣ ಅನುಭವ ಮಂಟಪ ಕಟ್ಟಿದ್ದು, ತಾನೇ ಅಧ್ಯಕ್ಷನಾಗಿ ಕೂರುವ ಅವಕಾಶಗಳಿದ್ದರೂ ಅಲ್ಲಮ ಪ್ರಭುವನ್ನು ಅಧ್ಯಕ್ಷರನ್ನಾಗಿ ಮಾಡಿ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದಿದ್ದರು ಎಂದರು.
ಪಪಂ ನೂತನ ಅಧ್ಯಕ್ಷ ಎಂ.ಡಿ.ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ದತ್ತಿದಾನಿ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಹಾಲೇಶ್ ನವುಲೆ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೃಷ್ಣಾನಂದ್ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ್ ಕಳ್ಳಿಕೊನಿ, ದತ್ತಿದಾನಿ ಮಲ್ಲಿಕಾರ್ಜುನ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಉದ್ಯಮಿ ನಾಗರಾಜ್ ಗುತ್ತಿ, ಶಿಕ್ಷಕ ಮಾಲತೇಶ್ ಇದ್ದರು. ಅಕ್ಕನ ಬಳಗದವರು ಪ್ರಾರ್ಥಿಸಿದರು. ದೀಪಕ್ ಧೋಂಗಡೇಕರ್ ಸ್ವಾಗತಿಸಿದರು. ಸುನಂದಾ ವಂದಿಸಿದರು. ಡಿ.ಶಿವಯೋಗಿ ನಿರೂಪಿಸಿದರು.