

ಸೋಮವಾರಪೇಟೆ: ಸ್ವಾಮೀಜಿ, ಸಾಧು-ಸಂತರು ಕೇವಲ ಒಂದು ವರ್ಗ, ಜಾತಿಗೆ ಮಾತ್ರ ಸೀಮಿತವಾಗಬಾರದು. ಧರ್ಮ ಜಾಗೃತಿ ಕಾರ್ಯದಲ್ಲಿ ಎಲ್ಲ ಸಮುದಾಯವನ್ನೂ ಒಂದುಗೂಡಿಸಿಕೊಳ್ಳಬೇಕು ಎಂದು ಅರಶಿನಕುಪ್ಪೆ ಸಿದ್ದಲಿಂಗಪುರ ಶ್ರೀ ಮಂಜುನಾಥ ಕ್ಷೇತ್ರದ ಪ್ರಧಾನ ಗುರು ಶ್ರೀ ರಾಜೇಶ್‌ನಾಥ್ ಜೀ ಅಭಿಪ್ರಾಯಿಸಿದರು.
ಪಟ್ಟಣದ ವಿರಕ್ತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಮಠಾಧೀಶ ಶ್ರೀ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ ಜನ್ಮ ವರ್ಧಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಹಾನ್ ದಾರ್ಶನಿಕರಾದ ಬಸವಣ್ಣನವರು ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದು, ಅವರನ್ನೂ ಸಹ ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಿಕೊಳ್ಳಬಾರದು ಎಂದರು.
ಧರ್ಮ ಜಾಗೃತಿಯ ವಿಚಾರದಲ್ಲಿ ಸಾಧು ಸಂತರ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಲೋಕ ಕಲ್ಯಾಣಕ್ಕೆ ಸ್ವಾಮೀಜಿಗಳೂ ಸೇರಿದಂತೆ ಇಡೀ ಸಮುದಾಯ ಶ್ರಮಿಸಬೇಕು ಎಂದು ತಿಳಿಸಿದರು.
ಮಠಮಾನ್ಯಗಳು ಸಮಾಜದ ಸುಧಾರಣೆಗೆ ಇರುವ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿರಕ್ತ ಮಠದಿಂದಲೂ ಸಮಾಜ ಸುಧಾರಣೆಯ ಕಾರ್ಯಗಳು ಆಗಲಿ. ಯುವ ಸ್ವಾಮೀಜಿಗಳು ಸಮಾಜಕ್ಕೆ ಶಕ್ತಿ ತುಂಬಿ, ಮಾರ್ಗದರ್ಶನ ನೀಡುವಂತಾಗಲಿ ಎಂದು ಆಶಿಸಿದರು.
ವಿರಕ್ತ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶಿದೇಂದ್ರ ಸ್ವಾಮೀಜಿ ಮಾತನಾಡಿ, ಜನ್ಮ ವರ್ಧಂತಿಯಂದು ಭಕ್ತರು ಸಲ್ಲಿಸುವ ಗುರು ಭಕ್ತಿಯು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಮಠದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮಠದ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರವೂ ಮಹತ್ತರವಾಗಿದೆ ಎಂದರು.
ಈ ಸಂದರ್ಭ ಪಟ್ಟಣದ ವೀರಶೈವ ಸಮಾಜದ ಅಧ್ಯಕ್ಷ ಕೆ.ಎನ್.ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ವೀರಶೈವ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಯುವರಾಜ್, ಜೇಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್, ಅಕ್ಕನ ಬಳಗದ ಗೀತಾ ರಾಜು, ಮಾಯಾ ಗಿರೀಶ್ ಇತರರು ಇದ್ದರು.