ಬಸವ ತತ್ವ ಸಾರಿದ ಸಂತ ಶ್ರೀ ಗುರುಮಲ್ಲೇಶ್ವರರು

ತಿ.ನರಸೀಪುರ ತಾಲೂಕಿನ ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ ಶಿಲಾ ಪ್ರತಿಮೆ ಅನಾವರಣ ಹಾಗೂ ಶರಣ ಸಂಗಮ ಸಮಾರಂಭವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಮುರುಘ ರಾಜೇಂದ್ರ ಸ್ವಾಮೀಜಿ, ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಮಹಾಸ್ವಾಮೀಜಿ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ ಶಿಲಾ ಪ್ರತಿಮೆ ಅನಾವರಣ ಹಾಗೂ ಶರಣ ಸಂಗಮ ಸಮಾರಂಭವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಮುರುಘ ರಾಜೇಂದ್ರ ಸ್ವಾಮೀಜಿ, ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಮಹಾಸ್ವಾಮೀಜಿ ಇತರರು ಇದ್ದರು.
Published on

 ತಿ.ನರಸೀಪುರ: ಮೈಸೂರು, ಚಾಮರಾಜನಗರ ಭಾಗದಲ್ಲಿ ಮಠಗಳನ್ನು ಸ್ಥಾಪಿಸಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಶ್ರೇಷ್ಠ ಸಂತ ಶ್ರೀ ಗುರುಮಲ್ಲೇಶ್ವರರು ಎಂದು ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ ಶಿಲಾ ಪ್ರತಿಮೆ ಅನಾವರಣ ಹಾಗೂ ಶರಣ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕಾಲ್ನಡಿಗೆಯಲ್ಲೆ ಸಂಚರಿಸಿ ಬಸವಣ್ಣನವರ ತತ್ವ ಸಿದ್ಧಾಂತವನ್ನು ಜನರಿಗೆ ಮುಟ್ಟಿಸುವ ಮಹತ್ವದ ಕೆಲಸವನ್ನು ನಿರ್ವಹಿಸಿದರು ಎಂದರು.

ಕಂತೆ ಭಿಕ್ಷೆ ಪರಿಕಲ್ಪನೆಯನ್ನು ಜಾರಿಗೆ ತಂದವರು ಶ್ರೀ ಗುರುಮಲ್ಲೇಶ್ವರರು ಎಂದ ಅವರು, ಕಂತೆ ಭಿಕ್ಷೆ ಕಾಯಕ ಮಹತ್ತರವಾದದ್ದು. ಎಲ್ಲ ಭಕ್ತರ ಮನೆಯ ಆಹಾರವನ್ನು ಒಂದೇ ಪಾತ್ರೆಯಲ್ಲಿ ಹಾಕುತ್ತಾರೆ. ಯಾರ ಮನೆಯ ಅಹಾರ ಯಾವುದು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಪ್ರಸಾದ ಸೇವಿಸಿದ ಭಕ್ತನಿಗೂ ನಾನು ಯಾರ ಮನೆಯ ಊಟ ತಿಂದೆ ಎಂಬುದು ತಿಳಿಯುವುದಿಲ್ಲ. ಇಲ್ಲಿ ಯಾರ ಋಣವೂ ಯಾರ ಮೇಲೆಯೂ ಇರುವುದಿಲ್ಲ ಎಂದರು.

ಧರ್ಮ ಯಾವಾಗಲೂ ದೇವರ ನಡುವೆ ಅಡ್ಡಗೋಡೆಯಾಗಬಾರದು. ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ. ಕಷ್ಟದಲ್ಲಿ ಸಿಲುಕಿರುವವರನ್ನು ಪಾರು ಮಾಡುವುದೇ ನಿಜವಾದ ಧರ್ಮ ಎಂದರು.

ಸಾಲೂರು ಬೃಹನ್ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 18ನೇ ಶತಮಾನದ ಮಹಾನ್ ಪುರುಷೋತ್ತಮ ಶ್ರೀ ಗುರುಮಲ್ಲೇಶ್ವರರು. ದಾಸೋಹ, ಕಾಯಕ ಪರಂಪರೆ ಕೊಟ್ಟ ಸಂತ ಎಂದು ಅವರ ಸಾಧನೆ ಸಿದ್ಧಿಯನ್ನು ಕೊಂಡಾಡಿದರು.

ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಕೆಲ್ಲೂರ್ ಮಾತನಾಡಿ, ಸಿದ್ಧಗಂಗಾ ಮಠ, ಸುತ್ತೂರು ಮಠ ವೀರಶೈವ, ಲಿಂಗಾಯತ ಸಮಾಜದ ಎರಡು ಕಣ್ಣುಗಳು. ಇವೆರಡೂ ಮಠಗಳು ಇಲ್ಲದಿದ್ದರೆ ಎಷ್ಟೋ ಹಳ್ಳಿಗಳ ಜನರಿಗೆ ವಿದ್ಯಾಭ್ಯಾಸ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಮರಿಯಾಲ ಮಠದ ಶ್ರೀ ಮುರುಘಾ ರಾಜೇಂದ್ರ ಸ್ವಾಮೀಜಿ, ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ವೀರಶೈವ ಯುವ ಮುಖಂಡ ನಿಶಾಂತ್ ಮತ್ತಿತರರು ಮಾತನಾಡಿದರು. ವಿವಿಧ ಮಠಗಳ ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಪುಟಾಣಿಗಳಾದ ಸಾನ್ವತ್ ಅವರ ಭರತನಾಟ್ಯ ಹಾಗೂ ಶಿವಾಂಶು ಅವರು ವಚನ ಗಾಯನ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಖೋ ಖೋ ವಿಶ್ವಕಪ್ ವಿಜೇತ ಆಟಗಾರ್ತಿ ಕು.ಬಿ.ಚೈತ್ರಾ ಸೇರಿದಂತೆ ಹರಿಕಥಾ ವಿದ್ವಾಂಸ ಬದನವಾಳು ಶಿವಕುಮಾರ ಶಾಸ್ತ್ರೀ ಹಾಗೂ ಶ್ರೀ ಗುರುಮಲ್ಲೇಶ್ವರರ ಪ್ರತಿಮೆ ಕೆತ್ತಿದ ಶಿಲ್ಪಿ ಪ್ರವೀಣ್ ಹಾಗೂ ಅವರ ತಂದೆಯನ್ನು ಸನ್ಮಾನಿಸಲಾಯಿತು.

ಸಿದ್ದಲಿಂಗ ಶ್ರೀಗಳಿಂದ ಪ್ರತಿಮೆ ಅನಾವರಣ: ಶ್ರೀ ಗುರುಮಲ್ಲೇಶ್ವರ ಪ್ರತಿಮೆಯನ್ನು ಬೆಳಗ್ಗೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಂದ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಗುರುಮಲ್ಲೇಶ್ವರರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಗ್ರಾಮದ ಮುಖಂಡರು, ಶ್ರೀ ಗುರುಮಲ್ಲೇಶ್ವರ ಯುವ ಬಳಗ ದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net