ಸಮಾನತೆಗೆ ಶ್ರಮಿಸಿದ ಸಂತ ಪೂಜ್ಯ ಸಿದ್ಧೇಶ್ವರ ಶ್ರೀಗಳು

siddheshwar
Published on

ವರೂರ: ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಜಗಜ್ಯೋತಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗರಹಿತ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಶ್ರೀಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಹುಬ್ಬಳ್ಳಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ.ಕೆ. ನಾಯ್ಕರ ಹೇಳಿದರು.

ವರೂರು ಗ್ರಾಮದ ಜ್ಞಾನಯೋಗಾಶ್ರಮದಲ್ಲಿ ಗುರುವಾರ ಏರ್ಪಾಟಾಗಿದ್ದ ಸಿದ್ಧೇಶ್ವರ ಮಹಾ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಸಿದ್ಧೇಶ್ವರ ಶ್ರೀಗಳು ಜ್ಞಾನ ಸಂಪಾದಿಸಿ ಅದನ್ನು ಜನಮಾನಸಕ್ಕೆ ಹಂಚಿದರು. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು ಎಂದರು. ಅಲ್ಲದೆ, ಭಕ್ತರ ಹಾಗೂ ಸುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ವರ್ಷದೊಳಗೆ ಸುಸಜ್ಜಿತ ದೊಡ್ಡ ಮಟ್ಟದ ‘ಶ್ರೀ ಸಿದ್ಧೇಶ್ವರ ಜ್ಞಾನ ಯೋಗಾಶ್ರಮ’ ಕಟ್ಟಡ ನಿರ್ಮಾಣವಾಗಲಿ ಆಗಲಿ ಆಶಿಸಿದರು.

ನಿವೃತ್ತ ಉಪನ್ಯಾಸಕ ವಿ.ಎಫ್. ಪಾಟೀಲ ಮಾತನಾಡಿ, ‘ಸಿದ್ಧೇಶ್ವರ ಶ್ರೀಗಳು ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದ ದಾರ್ಶಕನಿಕರು. ವಿಜಯಪುರ ಜಿಲ್ಲೆಯ ಬಿಜ್ಜರಗಿಯಲ್ಲಿ ಜನಿಸಿದ ಶ್ರೀಗಳು ನಡೆದಾಡುವ ದೇವರು ಎನಿಸಿಕೊಂಡು ಜಗತ್‌ಪ್ರಸಿದ್ಧರಾದರು. ವೈಕುಂಠ ಏಕಾದಶಿಯಂದು ಇಚ್ಛಾಮರಣ ಹೊಂದಿದರು’ ಎಂದರು.

ಶ್ರೀ ಸಿದ್ಧೇಶ್ವರ ಸ್ವಾಮಿಗಳ ಜ್ಞಾನ ಯೋಗಾಶ್ರಮ ಸತ್ಸಂಗ ಸಮೂಹದ ಅಧ್ಯಕ್ಷ ಎಚ್.ವೈ. ಬಡಿಗೇರ ಸ್ವಾಗತಿಸಿದರು. ವೇಮೂ ಶೇಖರಯ್ಯನವರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಾಗನಗೌಡ ಸಿದ್ದನಗೌಡ್ರ ನಿರೂಪಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಬಾಬಣ್ಣ ನವಲಗುಂದ, ಜಗದೀಶ ಹಿರೇಮಠ, ಶ್ರೀಪಾಲ ಬಸ್ತಿ, ಅಶೋಕ ಮಾರಿಹಾಳ, ಸೋಮನಗೌಡ ಪಾಟೀಲ, ಮನೋಹರ ಮಿಸ್ಕಿನ್, ಗ್ರಾಪಂ ಸದಸ್ಯ ಚನ್ನಬಸಗೌಡ ಹನುಮಂತ ಗೌಡ್ರ, ಅಶೋಕ ಹುಲಗೂರು, ಯಲ್ಲಪ್ಪ ಹುಬ್ಬಳ್ಳಿ, ಶಿವಪ್ಪ ನೂಲ್ವಿ, ಯಲ್ಲಪ್ಪ ನೇರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net