

ರಬಕವಿ/ಬನಹಟ್ಟಿ: ಸರಳ ನಡೆಯ ಮೂಲಕ ಮಾನವೀಯ ಬದುಕಿಗೆ ಮೌಲ್ಯ ನೀಡಿ, ಸರಳತೆಯೊಂದಿಗೆ ಸಮಾಜ ಕಟ್ಟುವ ಕಾರ್ಯ ಮಾಡಿರುವ ಸಂತ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಎಂದು ವಿಜಯಪುರ ಜ್ಞಾನಯೋಗಾಶ್ರಮ ಅಧ್ಯಕ್ಷ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ಹೊಸೂರಿನಲ್ಲಿ ಮಂಗಳವಾರ ಸಂಜೆ ನಡೆದ ‘ನಿರಂತರ’ ಕಾರ್ಯಕ್ರಮದಲ್ಲಿ ‘ಬದುಕು ಅನುಭವದ ಪ್ರವಾಹ ಕುರಿತಾಗಿ ಸಿದ್ಧೇಶ್ವರ ಶ್ರೀಗಳ ಸ್ಮರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ನಡೆದು ಅವರ ಆದರ್ಶಗಳಿಗೆ ಗೌರವ ನೀಡಬೇಕು ಎಂದರು.
ಹುಲ್ಯಾಳದ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಎಲ್ಲ ದಾರ್ಶನಿಕ, ಸಂತರ ರೂಪವೇ ಸಿದ್ಧೇಶ್ವರ ಶ್ರೀಗಳಾಗಿದ್ದಾರೆ. ಸಂಪತ್ತು ಬದುಕಿಗಲ್ಲ, ಬಳಸಲು ಮಾತ್ರವೆಂಬ ಸಂದೇಶ ಸಾರಿ ಹೇಳುವ ಮೂಲಕ ಮನುಜ ಕುಲ ನೆಮ್ಮದಿಯ ಬದುಕಿಗೆ ಪೂರಕವಾಗಿ ಸಂದೇಶ ಸಾರಿದವರು ಎಂದರು.
ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಮಾತನಾಡಿ, ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ ಸಂತನೆಂಬ ಹತ್ತು ಹಲವು ನಾಮಾವಳಿಗಳಿಂದ ಜಗಪ್ರಸಿದ್ಧರಾಗಿದ್ದ ಸಿದ್ಧೇಶ್ವರ ಶ್ರೀಗಳು ಎರಡನೇ ವಿವೇಕಾನಂದ ಎನಿಸಿಕೊಂಡವರು. ಅಪಾರ ಭಕ್ತ ಸಾಗರವನ್ನು ಹೊಂದಿದ್ದ ಸಂತನ ಸ್ಮರಣೆಯಿಂದ ಜೀವನ್ಮುಕ್ತಿಯೆಂದರು.
ಹೊಸೂರಿನ ಪರಮಾನಂದ ಶ್ರೀಗಳು ನೇತೃತ್ವ ವಹಿಸಿದ್ದರು. ಮೈಗೂರಿನ ಗುರುಪ್ರಸಾದ ಮಹಾಸ್ವಾಮೀಜಿ, ಸದಲಗಾ ಶೃದ್ಧಾನಂದ ಸ್ವಾಮೀಜಿ ಮಾತನಾಡಿದರು.
ಅರುಣ ಬುದ್ನಿ, ಬಸವರಾಜ ಶಿರೋಳ, ವೆಂಕಣ್ಣ ಚಿಂಚಲಿ, ಪಾಂಡು ಗಾಯಕವಾಡ, ಕೃಷ್ಣಾ ಲೆಂಡಿ, ವೆಂಕನಗೌಡ ಪಾಟೀಲ, ವೆಂಕಟೇಶ ನಿಂಗಸಾನಿ, ಮಲ್ಲಣ್ಣ ಕಕಮರಿ, ಶಂಕರ ಕೆಸರಗೊಪ್ಪ ಇತರರಿದ್ದರು.