

ಚಿಕ್ಕಮಗಳೂರು: ಸಂತ ಸೇವಾಲಾಲ್ ಸಮಾಜಕ್ಕೆ ಉತ್ತಮ ದಾರಿ ಮತ್ತು ಗುರಿ ತೋರಿಸುವ ಮೂಲಕ ಸಾತ್ವಿಕ ಗುಣಗಳನ್ನು ತುಂಬುವ ಕಾರ್ಯ ಕೈಗೊಂಡವರು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂತ ಸೇವಾಲಾಲ್ ರಾಮಭಕ್ತರಾಗಿ ಸಮಾಜದಲ್ಲಿ ಸಾತ್ವಿಕ ಗುಣಗಳನ್ನು ತುಂಬುವ ಮೂಲಕ ಸಮಾಜವನ್ನು ಒಗ್ಗೂಡಿಸಿದ್ದಾರೆ. ಸುಸಂಸ್ಕøತಿಯೆಡೆಗೆ ಒಯ್ಯುವ ಕೆಲಸ ಮಾಡಿದ್ದಾರೆ. ಉತ್ತಮ ಗುರಿ ತೋರುವ ಕೆಲಸ ಮಾಡಿರುವ ಅವರ ಆದರ್ಶ ಸಮಾಜಕ್ಕೆ ಮಾದರಿ ಎಂದರು.
ಸಮುದಾಯ ಭವನಕ್ಕೆ ಒಂದು ಎಕರೆ:
ಜಿಲ್ಲೆಯಲ್ಲಿ ಸಂತ ಸೇವಾಲಾಲ್ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಜಾಗ ಗುರುತಿಸಲಾಗಿದ್ದು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಲಂಬಾಣಿ ಸಮುದಾಯವು ಭಾಷೆ, ಸಂಸ್ಕøತಿ, ಉಡುಪುಗಳಲ್ಲಿ ವಿಶಿಷ್ಟತೆ ಹೊಂದಿದೆ. ಅವರ ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಲಂಬಾಣಿ ಭಾಷಾ ಅಕಾಡೆಮಿ ಸ್ಥಾಪಿಸಲಾಗಿದೆ. ಆಧುನೀಕರಣದಲ್ಲಿ ಕಾರಣದಿಂದಾಗಿ ಲಂಬಾಣಿ ಭಾಷೆ, ಸಂಸ್ಕøತಿ ಅಳಿವಿನಂಚಿಗೆ ಹೋಗಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಈ ಕಾರ್ಯ ನಡೆದಿದೆ ಎಂದು ಹೇಳಿದರು.
ಸಂಸ್ಕøತಿ-ಪರಂಪರೆ ಸಾರುವ ಹಳ್ಳಿ:
ಪ್ರವಾಸೋದ್ಯಮ ಇಲಾಖೆ ಹಾಗೂ ಲಂಬಾಣಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಕೊಪ್ಪಳದ ಬಹದ್ದೂರು ಬಂಡಿಯಲ್ಲಿ ಲಂಬಾಣಿ ಸಂಸ್ಕøತಿಯ ಪರಂಪರೆ ಸಾರುವ ಹಳ್ಳಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಆ ಮೂಲಕ ದೇಶ-ವಿದೇಶದ ಪ್ರವಾಸಿಗರಿಗೆ ನಾಡಿನ ಲಂಬಾಣಿ ಸಂಸ್ಕøತಿ ಮತ್ತು ಪರಂಪರೆಯನ್ನು ಪರಿಚಯಿಸಬಹುದು. ಇದಕ್ಕಾಗಿ ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಸಚಿವ ಪ್ರಭು ಚೌಹಾಣ್ ಮತ್ತು ಲಂಬಾಣಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಅದಕ್ಕಾಗಿ ಪತ್ರ ವ್ಯವಹಾರ ನಡೆಸಿ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್ ಅಕ್ಷಯ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.