ಸಂತ ಕವಿ ಕನಕದಾಸರ ಚಿಂತನೆ ಪ್ರಸ್ತುತ

kanaka dasa
Published on

ಮಂಗಳೂರು: ನಾಡುಕಂಡ ಶ್ರೇಷ್ಠ ದಾರ್ಶನಿಕ ಸಂತ ಕವಿ ಕನಕದಾಸರ ಚಿಂತನೆ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ನಿಟ್ಟೆ ಸಮೂಹ ಸಂವಹನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ. ನೇಸರ ಕಾಡನಕುಪ್ಪೆ ಹೇಳಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ ಕೆ.ಎಸ್. ಹೆಗ್ದೆ ಮೆಡಿಕಲ್ ಅಕಾಡೆಮಿ ಮತ್ತು ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನಕದಾಸರ ಸಾಹಿತ್ಯ ಅದ್ಭುತ ಚಿಂತನೆ ಹಾಗೂ ಉಪಾಸನೆ ರಹಸ್ಯವುಳ್ಳದ್ದಾಗಿದೆ. ಅವರು ಬಳಸಿರುವ ಭಾಷೆ ಹಾಗೂ ತಿಳಿಹೇಳಿರುವ ವಿಚಾರಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಕನಕದಾಸರ ಕೀರ್ತನೆಗಳು ಭಕ್ತಿಪಾರಮ್ಯವನ್ನು ಸಾರುವುದರ ಜತೆಗೆ ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿದಿವೆ. ಯಾವುದೇ ಪಂಥ, ಜಾತಿಗೆ ಸೀಮಿತವಾಗದ ಅವರ ಬಾಳಿನ ಸಂದೇಶಗಳು ಆಧುನಿಕ ಸಮಾಜಕ್ಕೆ ಅವಶ್ಯಕವಾಗಿವೆ. ಕನಕದಾಸರು ಶ್ರೇಣೀಕೃತ ಸಮಾಜದ ಮೇಲು ಕೀಳುಗಳನ್ನು ಮೀರಿನಿಂತ ದಾರ್ಶನಿಕರು. ವಚನಕಾರರು ಹಾಗೂ ದಾಸ ಪರಂಪರೆಯ ಕೀರ್ತನಕಾರರು ಬದುಕಿನ ಬಗೆಯನ್ನು ಹೇಗೆ ಎತ್ತರಿಸಬಹುದೆಂದು ವಿಭಿನ್ನ ಕಾಲಘಟ್ಟಗಳಲ್ಲಿ ಲೋಕಕ್ಕೆ ತೋರಿಸಿಕೊಟ್ಟರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೆಡಿಕಲ್ ಎಜ್ಯುಕೇಶನ್ ಯುನಿಟ್‌ನ ಸಂಯೋಜಕ ಡಾ. ಕಿಶನ್ ಪ್ರಸಾದ್ ಎಚ್.ಎಲ್. ಮಾತನಾಡಿ, ವೈದ್ಯರಲ್ಲಿ ಆಧ್ಯಾತ್ಮಿಕ ಮತ್ತು ಮಾನವೀಯ ಗುಣಗಳಿರಬೇಕು. ಕನಕದಾಸರು ಯುದ್ಧರಂಗದಲ್ಲಿ ಗಾಯಾಳುವಾಗಿ ಪ್ರಾಣಾಂತಿಕ ಸ್ಥಿತಿಯಲ್ಲಿದ್ದವರು, ಅವರೆನ್ನುವಂತೆ ದೈವಕೃಪೆಯಿಂದಲೇ ಬಳಿಕದ ಬದುಕು ತನಗೊದಗಿ ಬಂತೆಂಬುದನ್ನು ಕಂಡುಕೊಂಡು ಆಧ್ಯಾತ್ಮಿಕ ಮತ್ತು ಮಾನವೀಯ ಸ್ಪರ್ಷವಿರುವ ತಮ್ಮ ಬರಹಗಳ ಮೂಲಕ ಬದುಕಿನ ಒಗಟನ್ನು ಒಡೆದು ತೋರಿದವರು. ಅವರ ಜೀವನ ಮೌಲ್ಯಗಳನ್ನು ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಸಾಯಿಗೀತಾ ಸ್ವಾಗತಿಸಿದರು. ಎ.ಬಿ. ಶೆಟ್ಟಿ ದಂತವೈದ್ಯಕೀಯ ಕಾಲೇಜಿನ ಸಿಬ್ಬಂದಿ ರಂಜಿನಿ ಪ್ರಾರ್ಥಿಸಿದರು. ಪ್ರಥಮ ಎಂಬಿಬಿಎಸ್ ವಿದ್ಯಾರ್ಥಿಗಳಾದ ಶ್ರುತಿ ಮತ್ತು ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸಾಯಿಗೀತಾ ವಂದಿಸಿದರು.

--------------

ಭಕ್ತಿ ಮಾರ್ಗದಲ್ಲಿ ಮೋಕ್ಷದ ಹಾದಿಯನ್ನು, ಸಮಾನತೆ ಮತ್ತು ಸತ್ಯದ ಸಂದೇಶವನ್ನು ಕೀರ್ತನೆಗಳ ಮೂಲಕ ನೀಡಿದ ಸಂತಶ್ರೇಷ್ಠ ಕನಕದಾಸರು. ಸತ್ಯದ ಅರಿವು ಮೂಡಿಸಿದ ಅವರ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು. ಸಂವಿಧಾನ, ಪ್ರಜಾಪ್ರಭುತ್ವ ಹೇಳುವ ಸಂದೇಶವನ್ನು ಕನಕದಾಸರು ಅಂದೇ ಹೇಳಿದ್ದಾರೆ. ಪ್ರೀತಿ, ಸಹಬಾಳ್ವೆ, ಒಗ್ಗಟ್ಟಿನ ಸಂದೇಶ ಅವರ ಕೀರ್ತನಾ ಸಾಹಿತ್ಯದಲ್ಲಿ ಕಾಣಬಹುದು.

-ಡಾ. ಕಿಶನ್ ಪ್ರಸಾದ್ ಎಚ್.ಎಲ್. ಸಂಯೋಜಕರು

ಮೆಡಿಕಲ್ ಎಜ್ಯುಕೇಶನ್ ಯುನಿಟ್, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net