

ಕುಶಾಲನಗರ:
ಕೂಡಿಗೆಯ ಕೊಡಗು ಸೈನಿಕ ಶಾಲೆಗೆ ಭಾರತೀಯ ವಾಯು ಸೇನೆಯ ತರಬೇತಿ ಕಮಾಂಡ್ ಏರ್ ಮಾರ್ಷಲ್ ನಾಗೇಶ್ ಕಪೂರ್ ಶನಿವಾರ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ತಮ್ಮ ಅನುಭವಗಳನ್ನು ಮತ್ತು ಒಳನೋಟಗಳನ್ನು ಹಂಚಿಕೊAಡರು. ವಿದ್ಯಾರ್ಥಿಗಳು ತಮ್ಮ ಜೀವನದ ಮಹಾತ್ವಾಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ಉತ್ಸಾಹದಿಂದ ಕಾರ್ಯಪ್ರವೃತರಾಗಬೇಕೆಂದು ಪ್ರೋತ್ಸಾಹಿಸಿದರು. ಯು.ಪಿ.ಎಸ್.ಸಿ, ಎನ್.ಡಿ.ಎ ಮತ್ತು
ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳಿಗೆ ಹಾಗೂ ಇತರೆ ಸೇನಾ ಇಲಾಖೆಯ ಪ್ರವೇಶಾತಿಗಳಿಗೆ ತಯಾರಿ ಮಾಡುವ ಕುರಿತು ಮಾರ್ಗದರ್ಶನ ನೀಡಿದರು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಬದ್ಧತೆ ಮತ್ತು ಸಮರ್ಥ ರಕ್ಷಣಾ ಅಧಿಕಾರಿಗಳಾಗಲು ನಿರ್ಣಾಯಕವಾಗಿರುವ ಅತಿ ಮುಖ್ಯ ಗುಣಗಳನ್ನು ಅರ್ಥೈಸಿಕೊಂಡು ಅದರಂತೆ ತಮ್ಮ ಭವಿಷವನ್ನು ಮುನ್ನಡೆಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ಜಿತ್ ಸಿಂಗ್ ಮಾತನಾಡಿ ಈ ಭೇಟಿಯು ಶಾಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮತ್ತು ಶೈಕ್ಷಣಿಕ ಕಲಿಕಾನುಭವವಾಗಿದೆ ಎಂದರು. ಇದೇ ವೇಳೆ ಯುದ್ಧವೀರರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸುವುದರ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪ ಪ್ರಾಂಶುಪಾಲಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರು, ಬೋಧಕ- ಬೋಧಕೇತರ ವರ್ಗದವರು ಎನ್‌ಸಿಸಿ ಮತ್ತು ಪಿಐ ಸಿಬ್ಬಂದಿ ವರ್ಗ ಹಾಗೂ ಶಾಲೆಯ ವಿದ್ಯಾರ್ಥಿಗಳು ಈ ಸಂದರ್ಭ ಇದ್ದರು.