

ಕುಶಾಲನಗರ:
ಕೂಡಿಗೆಯಲ್ಲಿ ಇರುವ ಕೊಡಗು ಸೈನಿಕ ಶಾಲೆಯ 29ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಗುರುವಾರ ನಡೆಯಿತು. ಹೆಚ್ ಕ್ಯೂ ಟಿ ಸಿ ಬೆಂಗಳೂರಿನ ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿ ಹಾಗೂ ಕೊಡಗು ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶಾಲೆಯ ಅಶ್ವದಳ ಶಾಲೆಯಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಅತಿಥಿಗಳನ್ನು ಕರೆತಂದಿತು. ಈ ಸಂದರ್ಭ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಮುಖ್ಯ ಅತಿಥಿಗಳು ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛ ಸಲ್ಲಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭ ಯುದ್ಧವೀರರ ಸ್ಮಾರಕದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಧ್ವಜ ಸ್ತಂಭ ಉದ್ಘಾಟಿಸಿದರು. ನಂತರ ಶಾಲೆಯ ಪರೇಡ್ ಮೈದಾನದಲ್ಲಿ ವಿದ್ಯಾರ್ಥಿಗಳು ನೀಡಿದ ಗೌರವ ವಂದನೆ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮನ್ ಕೊಡಗು ಸೈನಿಕ ಶಾಲೆ ಹದಿನೇಳು ವರ್ಷಗಳ ಹಿಂದೆ ಭವಿಷ್ಯದ ಸೈನಿಕ ಅಧಿಕಾರಿಗಳನ್ನು ನಿರ್ಮಿಸುವ ಮಹೋನ್ನತ ದೃಷ್ಟಿಕೋನದೊಂದಿಗೆ ಸ್ಥಾಪಿತವಾಗಿದ್ದು, ಇಂದು ತನ್ನ ಸಾಮರ್ಥ್ಯ ಮತ್ತು ಗೌರವ ವೃದ್ಧಿಸಿಕೊಂಡು ಗಣನೀಯ ಬೆಳವಣಿಗೆ ಕಂಡಿದೆ. ಕಾಲದ ಪರೀಕ್ಷೆಗೆ ತಕ್ಕಂತೆ ದೃಢವಾಗಿ ನಿಂತು, ಕಾಲಾನುಕ್ರಮವಾಗಿ ಆಧುನಿಕ ಶಿಕ್ಷಣ ಹಾಗೂ ತರಬೇತಿಯ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ, ದೈಹಿಕ, ನೈತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಸಂಸ್ಥೆ ಬೆಳೆದು ಬಂದಿರುವುದನ್ನು ಅವಲೋಕಿಸಿದರೆ ಹರ್ಷವೆನಿಸುತ್ತದೆ ಎಂದರು.
ಮಧ್ಯಾಹ್ನದ ಅವಧಿಯಲ್ಲಿ ಮುಖ್ಯ ಅಥಿತಿಗಳು 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮಟೆ ಕಲಾ ಪ್ರದರ್ಶನ, ಲೇಝಿಂ ನೃತ್ಯ ಕೌಶಲ್ಯ ಹಾಗೂ ಕೇರಳದ ಪ್ರಸಿದ್ಧ ಯುದ್ಧ ಕಲೆ ಕಳರಿಪಾಯಟ್ಟು ಪ್ರದರ್ಶನಗಳನ್ನು ವೀಕ್ಷಿಸಿದರು.