

ಅಂಕೋಲಾ: ತಾಲೂಕಿನ ಮೀನುಗಾರ ಸಮಾಜದ ವಿದ್ಯಾರ್ಥಿಗಳಿಗಾಗಿ ಮೇ 26ರಂದು ಒಂದು ದಿನದ ನಾವಿಕ-ಮಾರ್ಗದರ್ಶಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಮೀನುಗಾರ ರಕ್ಷಣಾ ವೇದಿಕೆ ಅಧ್ಯಕ್ಷ ಹರಿಹರ ಹರಿಕಂತ್ರ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆದ ವಿವಿಧ ಸಂಘಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಮೀನುಗಾರ ರಕ್ಷಣಾ ವೇದಿಕೆ, ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ ಮತ್ತು ನಾಗರೀಕ ವೇದಿಕೆಯ ಸಂಯುಕ್ತಾಶ್ರಾಯದಲ್ಲಿ ಪಟ್ಟಣದ ಕಲ್ಪವೃಕ್ಷ ಅಕಾಡೆಮಿಯ ಸಭಾಭವನದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಮೀನುಗಾರ ಸಮುದಾಯದ ಎಸ್ಎಸ್ ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮುಂದೇನು? ಹಾಗೂ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಶಿಬಿರದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಮೀನುಗಾರ ರಕ್ಷಣಾ ವೇದಿಕೆಯ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಜಿ.ಆರ್. ತಾಂಡೇಲ್ ಮಾತನಾಡಿ, ಮುಂದಿನ ಕೋರ್ಸ್ಗಳ ಆಯ್ಕೆ, ಶೈಕ್ಷಣಿಕ ಅವಕಾಶಗಳು ಮತ್ತು ಸವಾಲುಗಳ ಕುರಿತು ವಿವಿಧ ಶಿಕ್ಷಣ ಮಹಾ ವಿದ್ಯಾಲಯ ಮತ್ತು ಶಿಕ್ಷಣ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಮಾಹಿತಿ ಮತ್ತು ನೋಂದಣಿಗೆ ಹರಿಹರ ಹರಿಕಂತ್ರ, ಜಿ.ಆರ್. ತಾಂಡೇಲ್, ಮಾರುತಿ ಹರಿಕಂತ್ರ ಇವರನ್ನು ಸಂರ್ಪಸಬಹುದು. ಮೇ 24ರ ಸಂಜೆ 6ಗಂಟೆ ಒಳಗೆ ಹೆಸರು ನೊಂದಾಯಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
ನಾಗರೀಕ ವೇದಿಕೆಯ ಅಧ್ಯಕ್ಷ ನಾಗರಾಜ ನಾಯ್ಕ, ಮಹೇಶ ಗೌಡ, ಈಶ್ವರ ಗೌಡ, ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ, ಪ್ರದೀಪ ಸಾದಿಯೇ, ದಯಾನಂದ ಏರಾಗಿ, ಬೆಳಂಬಾರ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಶಾಂಬಾ ಖಾರ್ವಿ, ಬೆಳಂಬಾರ ಗ್ರಾಮ ಪಂಚಾಯತಿ ಸದಸ್ಯ ಜಗದೀಶ ಖಾರ್ವಿ ಇತರರು ಇದ್ದರು.