ಸೈಕಲ್ಲಲ್ಲಿ ಕರೊನಾ ಶಂಕಿತನ ಶವ ಸಾಗಣೆ

0102
Published on

ಬೆಳಗಾವಿ: ತೀವ್ರ ಜ್ವರದಿಂದ ಬಳಲುತ್ತಿದ್ದ ಕರೊನಾ ಶಂಕಿತ ವೃದ್ಧನೋರ್ವ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಸಾವಿಗೀಡಾಗಿದ್ದು, ಆರೋಗ್ಯಾಧಿಕಾರಿಗಳು ಶವ ಸಾಗಿಸಲು ಆಂಬುಲೆನ್ಸ ನೀಡದೇ ಅಮಾನವೀಯತೆ ತೋರಿದ್ದಾರೆ. ದಿಕ್ಕು ತೋಚದ ಸಂಬಂಧಿಕರು ಬಳಿಕ, ಸೈಕಲ್ ಮೇಲೆಯೇ ಶವ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆಗೆ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದ್ದು, ಎರಡು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಸದೆಪ್ಪ ಪರಸಪ್ಪ ಸಲಗಾರ (71) ಅವರಿಗೆ ಕರೊನಾ ಸೋಂಕಿನ ಲಕ್ಷಣ ಇರುವ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಾಗಲು ಆರೋಗ್ಯಾಧಿಕಾರಿಗಳು ಸೂಚಿಸಿದ್ದರು. ಆದರೆ, ಭಾನುವಾರ ಬೆಳಗ್ಗೆ 6 ಗಂಟೆಗೆ ಮನೆಯಲ್ಲಿಯೇ ಸದೆಪ್ಪ ಮೃತಪಟ್ಟಿದ್ದಾರೆ.

ಪತಿಯನ್ನು ಕಳೆದುಕೊಂಡ ವೃದ್ಧೆ ಗಂಗಮ್ಮ, ಶವ ಸಾಗಿಸಲು ಆಂಬುಲೆನ್ಸ್ ಕಳುಹಿಸುವಂತೆ ವೈದ್ಯಾಧಿಕಾರಿಗಳಲ್ಲಿ ಬೆಳಗ್ಗೆಯಿಂದಲೇ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲದೆ, ಕರೊನಾ ಸೋಂಕಿನ ಭೀತಿಯಿಂದ ಸ್ಥಳೀಯರೂ ಸಹ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಒಂದಿಬ್ಬರು ಸಂಬಂಧಿಗಳು ಆಗಮಿಸಿ, ಶವವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದಾರೆ. ಬಳಿಕ ಸೈಕಲ್ ಮೇಲೆ ಶವವಿಟ್ಟು ಅದರ ಮೇಲೆಯೇ ಕಟ್ಟಿಗೆಯನ್ನೂ ಇಟ್ಟುಕೊಂಡು ಸ್ಮಶಾನಕ್ಕೆ ಸಾಗಿಸಿ, ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net