ಮಲೆನಾಡಿಗೆ ಸೂಕ್ತ ಸಹ್ಯಾದ್ರಿ ಜಲಮುಕ್ತಿ ತಳಿ

11sri-3
Published on

ಶೃಂಗೇರಿ: ಮಲೆನಾಡು ಭಾಗ ಹಾಗೂ ಹೆಚ್ಚು ನೀರು ನಿಲ್ಲುವ ಸ್ಥಳಕ್ಕೆ ಸೂಕ್ತವಾಗುವ ಸಹ್ಯಾದ್ರಿ ಜಲಮುಕ್ತಿ ಭತ್ತದ ತಳಿಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಸಂಶೋಧನೆ ನಡೆಸಿ ರೈತರಿಗೆ ನೀಡಿದ್ದು ಇದು ಇಲ್ಲಿನ ವಾತಾವರಣಕ್ಕೆ ಸೂಕ್ತವಾಗಿದೆ ಎಂದು ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ದುಶ್ಯಂತಕುಮಾರ್ ಹೇಳಿದರು.

ಧರೆಕೊಪ್ಪ ಗ್ರಾಪಂ ವ್ಯಾಪ್ತಿಯ ಹೊನ್ನವಳ್ಳಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಏರ್ಪಡಿಸಿದ್ದ ಹೊನ್ನವಳ್ಳಿ ರಮೇಶ್‌ರವರ ಭತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ಮಲೆನಾಡಿನಲ್ಲಿ ಹೆಚ್ಚು ನೀರಿರುವ ಜಾಗದಲ್ಲಿ ಭತ್ತಬಿಟ್ಟು ಬೇರೆ ಏನನ್ನು ಬೆಳೆಯಲು ಸಾಧ್ಯವಿಲ್ಲ. ನಾವು ತಿನ್ನುವ ಆಹಾರ ಬೆಳೆಗೆ ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ವಾಣಿಜ್ಯ ಬೆಳೆಯತ್ತ ಹೆಚ್ಚು ಆಕರ್ಷಿತರಾಗುತ್ತಿರುವ ರೈತರು ಭತ್ತ ಬೆಳೆಯುವುದನ್ನು ಕೈಬಿಡುತ್ತಿದ್ದರು. ಇದೀಗ ಹೊಸ ತಂತ್ರಜ್ಞಾನ ಬಳಕೆ, ಯಾಂತ್ರಿಕರಣದಿಂದಾಗಿ ಭತ್ತ ಬೆಳೆಯಲು ರೈತರು ಆಸಕ್ತಿ ಹೊಂದುತ್ತಿದ್ದಾರೆ. ನಾವು ನಮಗಾಗಿ ಭತ್ತ ಬೆಳೆಯಬೇಕು. ಸಾಧ್ಯವಾದಷ್ಟು ಕಡಿಮೆ ರಾಸಾಯನಿಕ, ಕ್ರಿಮಿನಾಶಕ ಬಳಕೆ ಕಡಿಮೆ ಮಾಡಬೇಕು. ಇಲ್ಲಿನ ಮಣ್ಣು ಫಲವತ್ತಾಗಿದ್ದು, ಭತ್ತ ಬೆಳೆಯಲು ಸೂಕ್ತವಾಗಿದೆ. ಸಾಮೂಹಿಕ ಕೃಷಿಯಿಂದ ರೈತರಿಗೆ ಅನುಕೂಲವಾಗಲಿದೆ. ರೈತರು ಸೂಕ್ತ ಭತ್ತದ ತಳಿಯ ಬೀಜಕ್ಕಾಗಿ ಬೇಡಿಕೆ ಸಲ್ಲಿಸಬೇಕು. ಸಹ್ಯಾದ್ರಿ ಜಲಮುಕ್ತಿ ತಳಿಯು ಅಕಾಲಿಕ ಮಳೆಗೆ ಹೆಚ್ಚು ಬೀಳದೆ ಮಳೆಗಾಲದಲ್ಲಿ ನೀರು ನಂತರೂ ಕೊಳೆಯದಿರುವ ತಳಿಯಾಗಿದೆ ಎಂದರು.

ಸ್ಥಳೀಯ ಸಂಶೋಧನ ಕೇಂದ್ರದ ಡಾ.ಆರ್.ಜಯಪ್ರಕಾಶ್, ಡಾ.ಸಂಜೀವ ಜಕಾತಿಮಠ, ಧರೆಕೊಪ್ಪ ಗ್ರಾಪಂ ಉಪಾಧ್ಯಕ್ಷ ಭಾನುಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳಾದ ಗಿರೀಶ್, ಶ್ರೀವಾಸ್ತವ ಸ್ಥಳೀಯರಾದ ನಿಶ್ಚಲ್, ಅರುಣಕುಮಾರ್, ಮಾವಿನಕಾಡು ಬಾಲಕೃಷ್ಣ, ಸುಬ್ರಾವ್, ಶ್ರೀಕಂಠ ಹೆಗ್ಡೆ, ಸುಬ್ರಹ್ಮಣ್ಯ, ಶಿವಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net