ಸಹ್ಯಾದ್ರಿ-2024 ಸಮಾವೇಶ ನಾಳೆಯಿಂದ

6 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಮೊಗ್ಗದ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಪರಿಸರಕ್ಕಾಗಿ ನಾವು ಧಾರವಾಡ ಜಿಲ್ಲೆ ಸಂಸ್ಥೆಗಳ ಆಶ್ರಯದಲ್ಲಿ ಸೆ. 8, 9ರಂದು ಸಹ್ಯಾದ್ರಿ 2024 ರಾಜ್ಯ ಮಟ್ಟದ ಚಿಂತನ-ಮಂಥನ ಸಮಾವೇಶವನ್ನು ಸಂಘದಲ್ಲಿ ಏರ್ಪಡಿಸಿದೆ ಎಂದು ಸಮಾವೇಶದ ಸಂಚಾಲಕ ಡಾ. ಸಂಜೀವ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 8ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಪರಿಸರ ಕಾರ್ಯಕರ್ತ ಪಾಂಡುರಂಗ ಹೆಗಡೆ ಸಮಾವೇಶ ಉದ್ಘಾಟಿಸುವರು. ಅತಿಥಿಗಳಾಗಿ ಅಪ್ಪಿಕೋ ಚಳವಳಿ ಪ್ರವರ್ತಕ ಮಹಾಬಲೇಶ್ವರ ಹೆಗಡೆ, ಕವಿತಾ ಎಲೆದಳ್ಳಿ, ಲಿನೆಟ್​ ಡಿಸಿಲ್ವಾ, ಜನಾರ್ಧನ ಜಿ.ಎಲ್​. ಆಗಮಿಸುವರು. ಶಾರದಾ ಗೋಪಾಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬೆಳಗ್ಗೆ 11.45ಕ್ಕೆ ನದಿ ಮತ್ತು ನೀರು ಗೋಷ್ಠಿ ನಡೆಯಲಿದ್ದು, ಬೆಂಗಳೂರಿನ ನಿರ್ಮಲಾಗೌಡ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ನಡೆಯುವ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಗೋಷ್ಠಿಯಲ್ಲಿ ಸಾಗರದ ಅಖಿಲೇಶ ಚಿಪ್ಪಳಿ ವಿಷಯ ಮಂಡಿಸುವರು. ಸಂಜೆ 6 ಗಂಟೆಗೆ ಪರಿಸರಕ್ಕಾಗಿ ನಾವು-ಸಂಘಟನೆ ಕುರಿತು ಚರ್ಚೆ ನಡೆಯಲಿದೆ ಎಂದರು.
ಸೆ. 9ರಂದು ಬೆಳಗ್ಗೆ 10 ಗಂಟೆಗೆ ಗಾಡಗೀಳ ವರದಿ ಕುರಿತು ಶಿವಮೊಗ್ಗದ ಬಿ.ಎಂ. ಕುಮಾರಸ್ವಾಮಿ ಮಾತನಾಡುವರು. 11.45ಕ್ಕೆ ನಡೆಯುವ ಗೋಷ್ಠಿಯಲ್ಲಿ ಕಪ್ಪತಗುಡ್ಡ ಅರಣ್ಯ ರಕ್ಷಣೆ ಕುರಿತು ಶ್ರೀ ಶಿವಕುಮಾರ ಸ್ವಾಮೀಜಿ, ಮಧ್ಯಾಹ್ನ 2 ಗಂಟೆಗೆ ನಡೆಯುವ ಗೋಷ್ಠಿಯಲ್ಲಿ ಹವಾಮಾನ ಸಂಕಷ್ಟದ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಮಲೆನಾಡ ಬದುಕು ಕುರಿತು ಬಾಲಚಂದ್ರ ಹೆಗಡೆ, 3.30ಕ್ಕೆ ನಡೆಯುವ ಗೋಷ್ಠಿಯಲ್ಲಿ ಸಮತೋಲಿತ ಅಭಿವೃದ್ಧಿ ಕುರಿತು ಡಾ. ಪ್ರಕಾಶ ಭಟ್​ ಮಾತನಾಡಲಿದ್ದಾರೆ. ಸಂಕೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಸಂಜೀವ ಕುಲಕರ್ಣಿ ಸಮಾರೋಪ ಭಾಷಣ ಮಾಡುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಮಾವೇಶದಲ್ಲಿ ಚರ್ಚೆ ನಡೆಸುವ ವಿಷಯಗಳ ಮೇಲೆ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಈ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪಶ್ಚಿಮ ಘಟ್ಟಗಳ ಉಳಿವಿಗೆ ಒತ್ತಾಯ ಮಾಡಲಾಗುವುದು ಎಂದರು.
ಶಂಕರ ಕುಂಬಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net