ಸಾಹಿವಾಲ್ ತಳಿ ಅಭಿವೃದ್ಧಿ

sahival
Published on

ಮಡಿಕೇರಿ:

ದೇಸೀ ಗೋತಳಿಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ನಮ್ಮ ದೇಶದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುವ ಗೋ ತಳಿಗಳಿದ್ದು, ಇವರುಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಕೊಡಗಿನಲ್ಲೂ ಇಂಥ ಒಂದು ಕಾರ್ಯ ನಡೆಯುತ್ತಿದ್ದು ಕೂಡಿಗೆಯಲ್ಲಿ ಈ ಮೊದಲು ಇದ್ದ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಈಗ ವಿಶಿಷ್ಟ ದೇಸೀ ತಳಿಯ ಸಾಹಿವಾಲ್ ತಳಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ.

ಹೆಚ್ಚು ಹಾಲು ಕೊಡುವ ದೇಸೀ ತಳಿ ಪೈಕಿ ಒಂದಾಗಿರುವ ಸಾಹಿವಾಲ್ ಹಸುವಿಗೆ ಪಾಕಿಸ್ತಾನದ ಪಂಜಾಬ್‌ನ ಮಾಂಟೆಗ್ಮೊರಿ ಜಿಲ್ಲೆಯ ಸಾಹಿವಾಲ್ ಎಂಬ ಪ್ರದೇಶದಿಂದಾಗಿ ಈ ಹೆಸರು ಬಂದಿದೆ. ರಾಜಸ್ಥಾನದ ಶ್ರೀ ಗಂಗಾನಗರ, ಪಂಜಾಬ್‌ನ ಅಮೃತಸರ ಮತ್ತು ಫಿರೋಜ್‌ಪುರ ಜಿಲ್ಲೆಗಳನ್ನು ಒಳಗೊಂಡು ಈ ತಳಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ. ಇದು ಶುದ್ಧ ಭಾರತೀಯ ತಳಿಯ ಹಸು ಎಂದು ಗುರುತಿಸಲಾಗಿದೆ. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆ ಫಜಿಲ್ಕಾ ಮತ್ತು ಅಬೋಹರ್ ಪಟ್ಟಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಈ ತಳಿಯ ಹಸುಗಳು ಕಾಣಲು ಸಿಗುತ್ತದೆ.

ಹೆಚ್ಚು ಹಾಲು ಕೊಡುವ ಹಸುವಾಗಿ ಭಾರತ-ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ಈ ತಳಿಯನ್ನು ಸಾಕಷ್ಟು ಜನರು ಸಾಕುತ್ತಾರೆ. ಈ ತಳಿಯನ್ನು ಲೋಲಾ, ಲಂಬಿ ಬಾರ್, ಮುಲ್ತಾನಿ, ಮಾಂಟ್ಗೊಮೆರಿ ಹಾಗೂ ತೆಲಿ ಎನ್ನುವ ಹೆಸರುಗಳಿಂದಲೂ ಗುರುತಿಸುತ್ತಾರೆ. ಈ ಹಸುಗಳು ಕೆಂಪು, ಬೂದು ಬಣ್ಣಗಳ ಜತೆ ಬಿಳಿ ಚುಕ್ಕಿ ಹೊಂದಿರುತ್ತವೆ. ಸಣ್ಣ ಕೊಂಬುಗಳು, ದೊಡ್ಡ ಕೆಚ್ಚಲುಗಳು ಇವುಗಳ ಆಕರ್ಷಣೆ. ದೇಹವು ಹೊಳೆಯುವ ಚರ್ಮದೊಂದಿಗೆ ಬಲಿಷ್ಠವಾಗಿ ಕಾಣುತ್ತದೆ. ಉತ್ತಮ ಹಾಲು ಕೊಡುವ ತಳಿಯಾಗಿ ಸಾಹಿವಾಲ್ ಹಸುಗಳು ಹೆಸರು ಮಾಡಿದ್ದರೆ, ಇವುಗಳ ಹೋರಿಗಳು ಉಳುಮೆ, ಗಾಡಿ ಎಳೆಯುವಂಥ ಕಠಿಣ ಕೆಲಸಗಳಿಗೂ ಸೈ ಅನ್ನಿಸಿಕೊಂಡಿವೆ.

ಇಂಥ ಬಹು ಉಪಯೋಗಿ ದೇಸೀ ತಳಿಯ ಜಾನುವಾರನ್ನು ಅಭಿವೃದ್ಧಿ ಪಡಿಸಲು ಕೊಡಗಿನ ಕುಶಾಲನಗರ ತಾಲೂಕು ಕೂಡಿಗೆಯಲ್ಲಿ ಇರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 1959ರಲ್ಲಿ ಸರ್ಕಾರಿ ಡೈರಿ ಎಂಬ ಹೆಸರಿನಲ್ಲಿ ಆರಂಭವಾದ ಈ ಕೇಂದ್ರಕ್ಕೆ ರಾಜ್ಯದಲ್ಲೇ ಮೊದಲು ಸ್ಥಾಪನೆಯಾದ ಫಾರಂ ಎನ್ನುವ ಹೆಗ್ಗಳಿಕೆಯೂ ಇದೆ. ವಿಶ್ವವಿಖ್ಯಾತ ನಂದಿನಿ ಬ್ರಾಂಡ್ ಹುಟ್ಟಿದ್ದು ಕೂಡ ಇಲ್ಲಿಯೇ. ನಂತರ ಕೆಎಂಎಫ್‌ನ ಬ್ರಾಂಡ್ ಆಗಿ ಮಾರ್ಪಟ್ಟಿತು.

ಈಗ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವಾಗಿರುವ ಈ ಸಂಸ್ಥೆ ಇದಕ್ಕೂ ಮೊದಲು ಜರ್ಸಿ ತಳಿ ಸಂವರ್ಧನಾ ಕೇಂದ್ರವಾಗಿ ಹೆಸರು ಮಾಡಿತ್ತು. ಜರ್ಸಿ ತಳಿ ಹಸುಗಳನ್ನು ಹೆಚ್ಚು ಹಾಲು ಕೊಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾರ್ಯಚರಿಸುತ್ತಿದ್ದ ಈ ಕೇಂದ್ರದಲ್ಲಿ ವಿದೇಶಗಳಲ್ಲಿ ಲಭ್ಯವಿರುವ ಜರ್ಸಿ ತಳಿಗಳ ವೀರ್ಯವನ್ನು ಆಮದು ಮಾಡಿಕೊಂಡು ತಳಿ ಅಭಿವೃದ್ಧಿಪಡಿಸಲಾಗುತ್ತಿತ್ತು.

ಮೂಲ ತಳಿ ಹಾಳಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿತ್ತು. ನಿಗದಿತ ಪ್ರಮಾಣದಲ್ಲಿ ಹಾಲು ಕೊಡುವ ಹಸುವಿನ ಗಂಡು ಕರುವನ್ನು ಗುರುತಿಸಿ ವೈಜ್ಞಾನಿಕ ರೀತಿಯಲ್ಲಿ ಸಲಹುವ ಕೆಲಸ ಈ ಕೇಂದ್ರದಲ್ಲಿ ನಡೆಯುತ್ತಿತ್ತು. ಕರುಗಳು ಸೇರಿದಂತೆ ಪರಿಶುದ್ಧ ಜರ್ಸಿ ತಳಿಯ 112 ಜಾನುವಾರುಗಳು ಇಲ್ಲಿದ್ದವು. ಇದೀಗ ಈ ಎಲ್ಲಾ ಜಾನುವಾರುಗಳನ್ನು ಬೆಂಗಳೂರಿನ ಬನ್ನೇರುಘಟ್ಟಕ್ಕೆ ಸಾಗಿಸಲಾಗಿದ್ದು, ಕೂಡಿಗೆಯಲ್ಲಿ ಕೇವಲ ಸಾಹಿವಾಲ್ ತಳಿಗಳಿಗೆ ಮಾತ್ರ ಆದ್ಯತೆ ಕೊಡಲಾಗಿದೆ.

ಕೂಡಿಗೆಯ ಜಾನುವಾರು ತಳಿ ಅಭಿವೃದ್ಧಿ ಕೇಂದ್ರದ ಮೂಲಕ ಸಾಹಿವಾಲ್ ತಳಿ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ಕೊಟ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕೇಂದ್ರದಲ್ಲಿ ಸಾಹಿವಾಲ್ ತಳಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಪಂಜಾಬ್‌ನಿAದ ತರಲಾಗಿದ್ದ 10 ಜಾನುವಾರುಗಳ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಸಂಖ್ಯೆ ಈಗ ಮೂವತ್ತಕ್ಕೆ ಏರಿದೆ. 48 ಜಾನುವಾರುಗಳಿಗೆ ಇವುಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇನ್ನು 2-3 ವರ್ಷಗಳಲ್ಲಿ ಕೇಂದ್ರ ನಿಗದಿತ ಗುರಿ ತಲುಪಲಿದೆ ಎನ್ನುವುದು ಇಲ್ಲಿಯ ಅಧಿಕಾರಿಗಳ ವಿಶ್ವಾಸದ ನುಡಿ

ರಾಜ್ಯ ಸರ್ಕಾರ ಈ ಕೇಂದ್ರಕ್ಕೆ 2022-23ರಲ್ಲಿ 57.69 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಕಳೆದ ವರ್ಷ 8.59 ಲಕ್ಷ ರೂ.ಗಳನ್ನು ಕೊಟ್ಟಿದೆ. ಈ ಅನುದಾನ ಬಳಸಿಕೊಂಡು ಸಾಹಿವಾಲ್ ತಳಿ ಅಭಿವೃದ್ಧಿಗೆ ಸಂಬAಧಿಸಿದAತೆ ಕೇಂದ್ರದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ಇಲ್ಲಿ ಅಭಿವೃದ್ಧಿ ಆಗುವ ಸಾಹಿವಾಲ್ ಜಾನುವಾರುಗಳನ್ನು ರೈತರಿಗೆ ನೇರವಾಗಿ ಕೊಡುವುದಿಲ್ಲ. ಬದಲಿಗೆ ಉತ್ತಮ ಫಲವಂತಿಕೆಯ ಹೋರಿಗಳನ್ನು ತಳಿ ಅಭಿವೃದ್ಧಿಗೆ ಬಳಸಲಾಗುತ್ತದೆ. ಕೇಂದ್ರದಲ್ಲಿ ನಿಗದಿತ ಮಿತಿ ದಾಟಿದ ನಂತರ ಹೋರಿಗಳನ್ನು ಸರ್ಕಾರದ ನಿಯಮಾವಳಿ ಮೂಲಕ ಹರಾಜು ನಡೆಸಿ ರೈತರಿಗೆ ಕೊಡುವ ಚಿಂತನೆ ಇದೆ.

ಸರ್ಕಾರದಿಂದ ದೇಸೀ ತಳಿ ರಕ್ಷಣೆ

ಸಾಹಿವಾಲ್ ಸೇರಿದಂತೆ ದೇಸೀ ಗೋತಳಿಗಳ ಶುದ್ಧತೆಯನ್ನು ಕಾಪಾಡಿಕೊಳ್ಳಲು ಪಶುಪಾಲನಾ ಇಲಾಖೆ ಆದ್ಯತೆ ಕೊಟ್ಟಿದೆ. ಹರಾಜಿನ ಮೂಲಕ ರೈತರಿಗೆ ಶುದ್ಧ ದೇಸೀ ಗೋತಳಿಗಳ ಹೋರಿ ಕರುಗಳನ್ನು ಒದಗಿಸಲಾಗುತ್ತಿದೆ. ಘನೀಕೃತ ವೀರ್ಯ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳಿಗೆ ಉತ್ಕೃಷ್ಟವಾದ ದೇಸೀ ಗೋತಳಿಗಳ ಹೋರಿ ಕರುಗಳನ್ನು ಉತ್ಪಾದಿಸಿ ನೀಡಲಾಗುತ್ತಿದೆ. ಅಮೃತ ಸಿರಿ ಯೋಜನೆಯಡಿಯಲ್ಲಿ ಆಸಕ್ತ ರೈತರಿಗೆ ದೇಸೀ ಗೋತಳಿಗಳ ಹೆಣ್ಣು ರಾಸುಗಳನ್ನು ಅವುಗಳ ಮೌಲ್ಯದ ಶೇ.25ರಷ್ಟು ಪಡೆದುಕೊಂಡು ವಿತರಿಸಲಾಗುತ್ತಿದೆ. ಮೇವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ರೈತರಿಗೆ ಮೇವು ಬೆಳೆ ಬೇರುಗಳನ್ನು ನೀಡಲಾಗುತ್ತಿದೆ. ಪಶುಸಂಗೋಪನಾ ಚಟುವಟಿಕೆಗಳ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. 2021-22ನೇ ಸಾಲಿನಲ್ಲಿ ಗೋ ಸಂಕುಲ ಸಮೃದ್ಧಿ ಯೋಜನೆ ಅಡಿಯಲ್ಲಿ ಇತರೆ ರಾಜ್ಯಗಳ ದೇಸೀ ತಳಿಗಳಾದ ದೇವಣಿ, ಗಿರ್, ಸಾಹಿವಾಲ್, ಒಂಗೋಲ್ ತಳಿಗಳನ್ನು ರಾಜ್ಯದ ರೈತರಿಗೆ ಪರಿಚಯಿಸಲು ಇಲಾಖಾ ಕ್ಷೇತ್ರಗಳಲ್ಲಿ ನಿರ್ವಹಿಸಲಾಗುತ್ತಿದೆ. ದೇಸೀ ಗೋತಳಿಗಳ ಸಂರಕ್ಷಣೆ, ಮತ್ತು ನಿರ್ವಹಣೆಗಾಗಿ ಇಲಾಖೆಯ ಕಾವಲುಗಳನ್ನು ಸಂರಕ್ಷಿಸಲಾಗುತ್ತಿದೆ.

ದೇಸೀ ಹಸುಗಳ ಹಾಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರ ದೇಸೀ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ ಕೊಡುತ್ತಿದೆ. ಹೆಚ್ಚಿನ ಹಾಲು ಕೊಡುವ ದೇಸೀ ಹಸುಗಳ ಪೈಕಿ ಸಾಹಿವಾಲ್ ಕೂಡ ಒಂದಾಗಿದ್ದು, ಇದರ ತಳಿ ಅಭಿವೃದ್ಧಿಗಾಗಿ ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವನ್ನು ಗುರುತಿಸಲಾಗಿದ್ದು, ಇಲ್ಲಿ ಸಾಹಿವಾಲ್ ತಳಿಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ.

ಡಾ. ಲಿಂಗರಾಜು ದೊಡ್ಡಮನಿ, ಉಪನಿರ್ದೇಶಕ, ಪಶುಪಾಲನಾ ಇಲಾಖೆ ಕೊಡಗು

ದಕ್ಷಿಣ ಭಾರತ ಮೂಲದ ಜಾನುವಾರು ತಳಿಗಳು ಸಾಮಾನ್ಯವಾಗಿ ಉಳುಮೆ, ಗಾಡಿ ಎಳೆಯುವಂಥ ಶ್ರಮದ ಕೆಲಸಗಳಿಗೆ ಬಳಕೆ ಆಗುವಂಥ ತಳಿಗಳಾಗಿವೆ. ಇಲ್ಲಿ ಹೆಚ್ಚು ಹಾಲು ಕೊಡುವ ತಳಿಗಳು ಇಲ್ಲ. ಹಾಗಾಗಿ ದೇಸೀ ತಳಿಯ ಹೆಚ್ಚು ಹಾಲು ಕೊಡುವ ತಳಿಗಳನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗಿರ್ ತಳಿಯನ್ನು ಮೈಸೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮತ್ತೊಂದು ಹೆಚ್ಚು ಹಾಲು ಕೊಡುವ ತಳಿಯಾದ ಸಾಹಿವಾಲ್ ತಳಿಯನ್ನು ಕೂಡಿಗೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಡಾ. ಶ್ರೀದೇವ್, ಹಿರಿಯ ಪಶು ವೈದ್ಯಾಧಿಕಾರಿ, ಜಾನುವಾರು ಸಂವರ್ಧನಾ ಕೇಂದ್ರ, ಕೂಡಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net