ಸಾಮರಸ್ಯಕ್ಕೆ ಶರಣರ ಕೊಡುಗೆ ಅಪಾರ: ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಡಿ.ಬಿ.ಕರಡೋಣಿ ಅಭಿಮತ

25KARATAGI-01
Published on

ಕಾರಟಗಿ: ವರ್ಣ, ವರ್ಗಭೇದ, ಅಸಮಾನತೆಯನ್ನು ತೊಡೆದು ಹಾಕಿ ಸಾಮಾಜಿಕ ಸಹಕಾರ ಮತ್ತು ಸಾಮರಸ್ಯಕ್ಕೆ ಕಲ್ಯಾಣದ ಶರಣರ ಕೊಡುಗೆ ಅಪಾರ ಎಂದು ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಅಭಿಮತ ವ್ಯಕ್ತಪಡಿಸಿದರು.


ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಏರ್ಪಡಿಸಿರುವ ಎರಡು ದಿನಗಳ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಶನಿವಾರ ಮಾತನಾಡಿದರು. ದುಡಿಯದೇ ಭೋಗಿಸುವ ಹಕ್ಕು ಯಾರಿಗೂ ಇಲ್ಲ ಎನ್ನುತ್ತಲೇ ಬಸವಣ್ಣನವರು ಕಾಯಕ ಮತ್ತು ದಾಸೋಹದ ಮಹತ್ವವನ್ನು ಜನತೆಗೆ ತಿಳಿಸಿಕೊಟ್ಟರು. ಶರಣರ ಆಶಯದ ಜತೆಗೆ ಇಲ್ಲಿ ದಾಸೋಹಕ್ಕೆ ಎಲ್ಲಿಲ್ಲದ ಮಹತ್ವ ನೀಡಲಾಗಿದೆ. ಪಂಪನ ಕಾವ್ಯದಂತೆ ‘ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವ ತತ್ವ ಎಲ್ಲರೂ ಪಾಲಿಸಬೇಕಿದೆ. ಆಧುನಿಕ ಭರಾಟೆಯಲ್ಲಿ ಮನುಷ್ಯನ ದುರಾಸೆಯಿಂದಾಗಿ ಅಂತರ್ಜಲ ಕುಂಠಿತವಾಗುತ್ತಿದೆ. ಒಡಲಲ್ಲಿ ತುಂಗಭದ್ರೆ ಇದ್ದರೂ ನೀರಿಗಾಗಿ ಹೋರಾಟ ನಡೆಸಬೇಕಾಗಿದೆ. ಚಿಕ್ಕ ತಾಲೂಕಾದರೂ ಸಮೃದ್ಧವಾಗಿದೆ. ಆದರೆ, ಇಚ್ಛಾಶಕ್ತಿಯ ಕೊರತೆಯಿಂದಾಗಿ ಔದ್ಯೋಗಿಕ, ಆರ್ಥಿಕ ಬದಲಾವಣೆ ಆಗದಿರುವುದು ಖೇದಕರ ಎಂದರು.


ಕವಿರಾಜಮಾರ್ಗ ಕನ್ನಡದ ಮೊದಲ ಲಕ್ಷಣ ಗ್ರಂಥವಾಗಿದೆ. 10-11ನೇ ಶತಮಾನ ಕನ್ನಡ ಸಾಹಿತ್ಯದ ಸುವರ್ಣಯುಗ. ಜೈನ ತೀರ್ಥಂಕರರು ಪುರಾಣಗಳನ್ನು ರಚಿಸಿದರೂ ಅವೆಲ್ಲ ಆಯಾ ಕಾಲದ ಚರಿತ್ರೆಗಳೇ ಆಗಿವೆ. ಗಣಿತ, ಜ್ಯೋತಿಷ್ಯ, ವ್ಯಾಕರಣದ ಜತೆಗೆ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆಯನ್ನು ಮಹಾಕಾವ್ಯ ಮಾಧ್ಯಮದ ಎತ್ತರಕ್ಕೆ ಏರಿಸಿದ ಕೀರ್ತಿ ಜೈನ ಕವಿಗಳಿಗೆ ಸಲ್ಲುತ್ತದೆ. ವಚನ, ಹರಿದಾಸ, ಹೊಸಗನ್ನಡಯುಗಗಳಿಂದ ಕನ್ನಡ ಸಮೃದ್ಧವಾಗಿ ಬೆಳೆದಿದೆ. ನವೋದಯ, ನವ್ಯ, ಪ್ರಗತಿಶೀಲ ಮತ್ತು ದಲಿತ-ಬಂಡಾಯದ ಮೂಲಕವೂ ಈ ನಾಡಿಗೆ ಸಾಹಿತ್ಯದ ಕಣಜ ದೊರೆತಿದೆ ಎಂದು ತಿಳಿಸಿದರು.


ಸಮ್ಮೇಳನಕ್ಕೆ ಚಾಲನೆ ನೀಡಿದ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿವಿ ವಿಶ್ರಾಂತ ಕುಲಪತಿ ಶಾಂತಿನಾಥ ದಿಬ್ಬದ ಮಾತನಾಡಿ, ಭಾಷೆ, ಸಂಸ್ಕೃತಿಯ ಮೂಲತತ್ವವನ್ನು ಯಾರೂ ಮರೆಯಬಾರದು. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡ ಸಾಹಿತ್ಯ, ಭಾಷೆ ಜೀವಂತವಾಗಿ ಬದುಕುಳಿದಿದೆ. ಜನಪದದಲ್ಲಿ ರಂಜನೆ, ಸೊಗಡು, ಸಂತೋಷ ಮತ್ತು ಸಂಭ್ರಮ ಇವೆ. ವೈವಿಧ್ಯಮಯ ತಂತ್ರಜ್ಞಾನದ ಭರಾಟೆಯಲ್ಲಿ ಸಾಹಿತ್ಯ, ಭಾಷೆ ಇಳಿಮುಖವಾಗುತ್ತಿರುವುದು ವಿಷಾದದ ಸಂಗತಿ ಎಂದರು.


ಪುಸ್ತಕ ಮಳಿಗೆ ಉದ್ಘಾಟಿಸಿದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನಾಗಲಿಂಗನಗೌಡ ಎಸ್.ಪಾಟೀಲ್ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಸಿದ್ದು ಯಾಪಲಪರ್ವಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಡಿ.ಬಿ.ಕರಡೋಣಿಗೆ ಕನ್ನಡಧ್ವಜ ಹಸ್ತಾಂತರಿಸಿದರು. ಇಂಚರ, ಕನಸು ಕಂದಗಲ್ ಸಹೋದರಿಯರು ಹಾಗೂ ಸರ್ಕಾರಿ ಹಿಪ್ರಾ ಶಾಲೆ ವಿದ್ಯಾರ್ಥಿಗಳ ಭರತನಾಟ್ಯ ಪ್ರದರ್ಶನ ನೀಡಿದರು. ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net