ತಿಂಗಳಾದರೂ ಬಾರದ ಕಲಾವಿದರ ಸಂಭಾವನೆ: ಸಾಹಿತ್ಯ ಸಮ್ಮೇಳನದಲ್ಲಿ ರಂಜಿಸಿದ್ದವರ ಪರದಾಟ

25 HVR 8 Sammelana Invitation
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ನಗರದಲ್ಲಿ ನಡೆದ ಅದ್ಧೂರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರನ್ನು ರಂಜಿಸಿದ್ದ 250ಕ್ಕೂ ಅಧಿಕ ಕಲಾತಂಡಗಳ ಸಾವಿರಾರು ಕಲಾವಿದರಿಗೆ ತಿಂಗಳಾದರೂ ಸಂಭಾವನೆ ದೊರೆತಿಲ್ಲ.
ಜನವರಿ 6, 7 ಹಾಗೂ 8ರಂದು ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ನಗರಕ್ಕೆ ವಿವಿಧ ಪ್ರಕಾರದ 250 ಕಲಾತಂಡಗಳ ಮೂಲಕ ಸಾವಿರಾರು ಕಲಾವಿದರು ಆಗಮಿಸಿದ್ದರು. ಮೂರು ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದ್ದರು. ಈ ಮೂಲಕ ಸಮ್ಮೇಳನ ಯಶಸ್ವಿಯಾಗಲು ತಮ್ಮದೇ ಆದ ಕೊಡುಗೆಯನ್ನು ಕಲಾವಿದರ ಬಳಗ ನೀಡಿತ್ತು.
ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಮಂಡ್ಯ, ರಾಯಚೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರು ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು. ಇಂತಹ ಕಲಾವಿದರಿಗೆ ಗೌರವಯುತವಾಗಿ ನೀಡಬೇಕಾಗಿರುವ 50 ಲಕ್ಷ ರೂ.ಗೂ ಅಧಿಕ ಸಂಭಾವನೆಯನ್ನು ಕೊಡದೇ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಮ್ಮನೆ ಕುಳಿತಿದೆ. ಇದರಿಂದಾಗಿ ಕಲಾವಿದರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವಂತಾಗಿದೆ.
50 ಲಕ್ಷ ರೂ. ಬರಬೇಕಿದೆ
ಸಾಂಸ್ಕೃತಿಕ ಕಲಾತಂಡಗಳಿಗೆ ನೀಡಲೆಂದು ಜಿಲ್ಲಾಡಳಿತ 42 ಲಕ್ಷ ರೂ. ಮೀಸಲು ಇಟ್ಟಿತ್ತು. 250 ಕಲಾ ತಂಡಗಳಿಗೆ ಲೆಕ್ಕ ಹಾಕಿದಾಗ 50 ಲಕ್ಷ ರೂ. ದಾಟಿತ್ತು. ಈ ನಡುವೆ ಲೆಕ್ಕಾಚಾರ, ದಖಲೆ ಸಂಗ್ರಹವೂ ಹೆಚ್ಚು ಕಡಿಮೆ ಆಗಿತ್ತು. ಇದೇ ಕಾರಣಕ್ಕೆ ತಡವಾಗಿದೆ ಎನ್ನಲಾಗಿದೆ.
ಯಾರ‌್ಯಾರಿಗೆ ಎಷ್ಟು ಸಂಭಾವನೆ ?
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಾರ ಜಾನಪದ ಕಲಾತಂಡಕ್ಕೆ 15 ಸಾವಿರ ರೂ. ಜತೆಗೆ ದೂರದ ಊರಿನಿಂದ ಬಂದ ತಂಡಕ್ಕೆ ಹೆಚ್ಚುವರಿಯಾಗಿ 5 ಸಾವಿರ ಸೇರಿ 20 ಸಾವಿರ ರೂ., ವೈಯಕ್ತಿಕ ಕಲಾವಿದರಿಗೆ ತಲಾ 10 ಸಾವಿರ ರೂ. ನೀಡಲಾಗುತ್ತದೆ. 200ಕ್ಕೂ ಅಧಿಕ ಕಲಾವಿದರಿದ್ದ ಮೂಡಬಿದರೆಯ ಆಳ್ವಾಸ್ ಕಲಾ ತಂಡಕ್ಕೆ 2 ಲಕ್ಷ ರೂ., ಪ್ರಾಣೇಶ ಕಲಾ ತಂಡಕ್ಕೆ 1.15 ಲಕ್ಷ ರೂ., ಹನುಮಂತ ಲಮಾಣಿ ತಂಡಕ್ಕೆ 11 ಸಾವಿರ ರೂ., ನಿಗದಿಪಡಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ತಿಳಿಸಿದ್ದಾರೆ.
ಕೋಟ್:
ಸಮ್ಮೇಳನಕ್ಕೆಂದು ಸರ್ಕಾರ 20 ಕೋಟಿ ರೂ.ಗೂ ಅಧಿಕ ಹಣ ಬಿಡುಗಡೆ ಮಾಡಿತ್ತು. ಹೀಗಿದ್ದರೂ ಸ್ವಂತ ಖರ್ಚಿನಿಂದ ಸಮ್ಮೇಳನ ಯಶಸ್ವಿಗೊಳಿಸಿರುವ ಕಲಾವಿದರಿಗೆ ಒಂದು ತಿಂಗಳಾದರೂ ಸಂಭಾವನೆ ನೀಡದೇ ಅವಮಾನಿಸಲಾಗುತ್ತಿದೆ.
ಸಂಜಯ ಗಾಂಧಿ ಸಂಜೀವಣ್ಣವರ, ಸಾಮಾಜಿಕ ಕಾರ್ಯಕರ್ತ, ಹಾವೇರಿ
ಕೋಟ್:
ಕಲಾವಿದರಿಗಾಗಿ 42 ಲಕ್ಷ ರೂ. ಮೀಸಲು ಇಡಲಾಗಿತ್ತು. ಬೇಡಿಕೆ 50 ಲಕ್ಷ ದಾಟಿದ್ದರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಜಿಲ್ಲಾಧಿಕಾರಿಯವರು ಇದಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಒಂದೆರೆಡು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ.
ಡಾ.ಉಮೇಶಪ್ಪ, ಸದಸ್ಯ ಕಾರ್ಯದರ್ಶಿ, ಸಮ್ಮೇಳನ ಸಾಂಸ್ಕೃತಿಕ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net