

ಹುಬ್ಬಳ್ಳಿ: ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಸಾಹಿತ್ಯ ಪ್ರಕಾಶನ ಭಂಡಾರದ ನವೀಕರಣಗೊಂಡ ಮಳಿಗೆಯನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಅವರು ಬುಧವಾರ ಉದ್ಘಾಟಿಸಿದರು.
ಡಾ. ವಿಜಯ ಸಂಕೇಶ್ವರ ಅವರು ನವೀರಣಗೊಂಡ ಸಾಹಿತ್ಯ ಭಂಡಾರದ ಮಳಿಗೆ ವೀಕ್ಷಿಸಿ, ಅಲ್ಲಿನ ಪುಸ್ತಕ ಸಂಗ್ರಹದ ಬಗ್ಗೆ ತಿಳಿದುಕೊಂಡರು. ವಿವಿಧ ಪುಸ್ತಕಗಳನ್ನು ಕುತೂಹಲದಿಂದ ನೋಡಿ, ಇಂತಹ ಪುಸ್ತಕಗಳನ್ನು ಹೆಚ್ಚೆಚ್ಚು ಓದಬೇಕು ಹಾಗೂ ಸಂಗ್ರಹಯೋಗ್ಯವಾಗಿದೆ ಎಂದು ಸುತ್ತಲಿದ್ದವರಿಗೆ ಹೇಳಿದರು. ಇತಿಹಾಸ ಹೊಂದಿರುವ ಈ ಪ್ರಕಾಶನ ಸಂಸ್ಥೆಯಲ್ಲಿ ಮೇರು ಸಾಹಿತಿಗಳು ಬಂದು ಹೋಗಿದ್ದಾರೆ. ಓದುಗರ ನೆಚ್ಚಿನ ತಾಣವೂ ಹೌದು ಎಂದು ಬಣ್ಣಿಸಿದರು.
ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಮಾತನಾಡಿ, ಪುಸ್ತಕಗಳು ನಮ್ಮ ಸಂಸ್ಕೃತಿಯ ಸಂಕೇತ. ಜನರು ಹೆಚ್ಚು ಪುಸ್ತಕಾಲಯಗಳಿಗೆ ಹೋಗಬೇಕು. ಭಗವಂತನಿರುವ ಆಲಯದಲ್ಲಿ ದೇವರಿದ್ದರೆ, ಪುಸ್ತಕಾಲಯದಲ್ಲಿ ಜ್ಞಾನ, ಅರಿವು ಇದೆ. ಇದು ನಮ್ಮನ್ನು ನಾವು ತಿದ್ದಿಕೊಳ್ಳಲು ಹಾಗೂ ಲೋಕದ ಜ್ಞಾನ ತಿಳಿದುಕೊಳ್ಳಲು ಇರುವ ಪ್ರಮುಖ ಕೇಂದ್ರ. ಪುಸ್ತಕಗಳು ನಮ್ಮನ್ನು ತಿದ್ದುವ ಗುರುಗಳು ಎಂದರು.
ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಅವರು, 1934ರಲ್ಲಿ ಮ. ಗೋವಿಂದರಾವ್ ಮತ್ತು ಮ. ಅನಂತಮೂರ್ತಿ ಸಹೋದರರಿಂದ ಹುಟ್ಟು ಹಾಕಲ್ಪಟ್ಟ ಸಾಹಿತ್ಯ ಪ್ರಕಾಶನವು ಐತಿಹಾಸಿಕವಾಗಿದೆ. ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಬಗೆ ಬಗೆಯ ಪ್ರಕಾಶಕರ ಪುಸ್ತಕಗಳನ್ನು ಓದುಗರಿಗೆ ಕೊಡಲಾಗುತ್ತಿದೆ. ಮಳಿಗೆಯಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇವೆ. ಮುಂದಿನ ಯುಗಾದಿಯವರೆಗೂ ಶೇ. 50ರಷ್ಟು ರಿಯಾಯಿತಿ ಕೊಡಲಾಗುವುದು ಎಂದು ಪ್ರಕಟಿಸಿದರು.
ಶೈಲಜಾ ಸುಬ್ರಮಣ್ಯ, ಎಂ.ಎಸ್. ಋತ್ವಿಕ್, ಅಂಜುಶ್ರೀ ಋತ್ವಿಕ್, ವಾಸುದೇವ ಲಕ್ಷ್ಮೇಶ್ವರ, ಶ್ರೀನಿವಾಸ ಬಾಗಲಕೋಟೆ, ಪ್ರಲ್ಹಾದ ಗುಡಿ, ಸುರೇಶ ಮೇಲಮುದ್ದಿ, ಅರುಣ ಏಕಬೋಟೆ, ಅಭಯ ಬಾಗಲಕೋಟೆ, ವಿ.ಜಿ. ಪಾಟೀಲ, ಅರುಣಕುಮಾರ ಹಬ್ಬು, ಮಧುಕರ್ ಎಕ್ಕುಂಡಿ, ಪ್ರೊ. ಕೌಜಲಗಿ, ಬಿ.ಎಸ್. ಮಾಳವಾಡ ಇತರರು ಇದ್ದರು.