

ಹುಬ್ಬಳ್ಳಿ: ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನವು ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 25ನೇ ಪುಣ್ಯತಿಥಿ ಅಂಗವಾಗಿ ವಿಶೇಷ ಸಾಧಕ ಪ್ರಕಾಶಕರಿಗೆ ಗೌರವಾರ್ಪಣೆ ಹಾಗೂ 10 ವಿನೂತನ ಕೃತಿಗಳ ಬಿಡುಗಡೆ ಸಮಾರಂಭವನ್ನು ಸೆ. 17ರಂದು ಸಂಜೆ 5.30ಕ್ಕೆ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಏರ್ಪಡಿಸಿದೆ ಎಂದು ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದ ಪ್ರಕಾಶನ ಸಂಸ್ಥೆ ರವೀಂದ್ರ ಪುಸ್ತಕಾಲಯದ ವೈ.ಎ. ದಂತಿ ಅವರಿಗೆ ಈ ಬಾರಿ ಗೌರವಾರ್ಪಣೆ ಸಲ್ಲಿಸಲಾಗುತ್ತಿದೆ. ಕನ್ನಡದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಗಂಗಾವತಿ ಪ್ರಾಣೇಶ ಅವರು ಪುಸ್ತಕ ಬಿಡುಗಡೆ ಮಾಡುವರು ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ ಅವರು ಅಪರಾಧ ತಡೆಯಲ್ಲಿ ಸಮಾಜದ ಪಾತ್ರ, ಪರಿಸರ ತಜ್ಞ ಶಿವಾನಂದ ಕಳವೆ ಅವರು ಮರಗಳ ಅಭಿವೃದ್ಧಿಯ ಮರುವಿಮರ್ಶೆ ಕುರಿತು ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಬಿಡುಗಡೆಯಾಗಲಿರುವ ಸಾಹಿತ್ಯ ಪ್ರಕಾಶನದ ಪುಸ್ತಕಗಳು. ಅಟಲ್ ಬಿಹಾರಿ ವಾಜಪೇಯಿ& ನನ್ನ ಐವತ್ತೊಂದು ಕವಿತೆಗಳು ಹಾಗೂ ತ್ರಿಕೋಣ ಪ್ರೇಮ ತಂದ ದುರಂತ& ಡಾ. ಡಿ.ವಿ. ಗುರುಪ್ರಸಾದ್, ಕ್ರಾಂತಿಪರ್ವ (ಕಾದಂಬರಿ) ಡಾ. ಬಾಬು ಕೃಷ್ಣಮೂರ್ತಿ, ನನ್ನದಲ್ಲದ್ದು (ಕಾದಂಬರಿ) ಡಾ. ನಾ. ಮೊಗಸಾಲೆ, ಬೇಟೆಗಾರನ ಹುಲಿ ಹೆಜ್ಜೆ& ಕೆದಂಬಾಡಿ ಜತ್ತಪ್ಪ ರೈ ಸಂ. ನರೇಂದ್ರ ರೈ ದೇರ್ಲ, ಶಿಖಂಡಿ& ಶರದ್ ಸಿಂಹ, ಕನ್ನಡಕ್ಕೆ: ಡಿ.ಎನ್. ಶ್ರೀನಾಥ್, ಭಾರತ ಕಥಾ (ಕಾದಂಬರಿ) ಡಾ. ನಾ. ಮೊಗಸಾಲೆ, ಕಾನುಟ್ಟ (ಕಾದಂಬರಿ) ಶಿವಾನಂದ ಕಳವೆ, ನಾನು ಕಂಡ ಅಮೇರಿಕೆ ಹಾಗೂ ತೂರಿದ ಚಿಂತನಗಳು& ರಾ.ಯ. ಧಾರವಾಡಕರ ಈ ಪುಸ್ತಕಗಳನ್ನು ಅಂದು ಬಿಡುಗಡೆ ಮಾಡಲಾಗುತ್ತದೆ. ಬೆಲೆಯಲ್ಲಿ ವಿಶೇಷ ರಿಯಾಯಿತಿ ಕೂಡ ಇರಲಿದೆ ಎಂದು ಹೇಳಿದರು.
ಅಸಾಮಾನ್ಯ ವ್ಯಕ್ತಿ: 1965ರಲ್ಲಿ ಆರಂಭವಾದ ರವೀಂದ್ರ ಪುಸ್ತಕಾಲಯದ ಯಲ್ಲಪ್ಪ ಅಪ್ಪಾರಾವ್ ದಂತಿ ಅವರು ನಾಡಿನ ಪುಸ್ತಕ ಪ್ರಿಯರಿಗೆಲ್ಲ ಪರಿಚಯ. ಬಸ್ನಲ್ಲಿ ಓಡಾಡಿ ಜನರಿಗೆ ಓದುವ ಹವ್ಯಾಸ ಬೆಳೆಸಿದವರು. ಬ್ಯಾಗಿನಲ್ಲಿ ಪುಸ್ತಕ ತುಂಬಿಕೊಂಡು ದಾವಣಗೆರೆ, ಹರಿಹರ, ಹರಪನಹಳ್ಳಿ, ಕೂಡ್ಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಬೆಟಗೇರಿ, ಮಂಗಳೂರು, ಪುತ್ತೂರು ಹೀಗೆ ಹಲವು ಕಡೆಗಳಲ್ಲಿ ಸಂಚರಿಸಿ ಜ್ಞಾನ ಸಂಪತ್ತು ಹಂಚಿದರು. ಸರ್ಕಾರಿ ನೌಕರಿಯಲ್ಲಿದ್ದ ದಂತಿ ಅವರಿಗೆ ಬದುಕಲು ಲೈಬ್ರರಿ ಬೇಕಿರಲಿಲ್ಲ. ಪುಸ್ತಕ ಪ್ರಕಾಶನ ಅಗತ್ಯವಿರಲಿಲ್ಲ. ಮಾರಾಟದ ಉಸಾಬರಿ ಅನಿವಾರ್ಯವಾಗಿರಲಿಲ್ಲ. ಆದರೂ, ಜನರಿಗೆ ಪುಸ್ತಕಗಳನ್ನು ತಲುಪಿಸುವ ಅವರ ಪುಸ್ತಕ ಪ್ರೀತಿ 84 ವರ್ಷಗಳ ಈ ವಯೋಮಾನದಲ್ಲೂ ಒಂದಿನಿತೂ ನಲುಗಿಲ್ಲ.
ಇಂತಹ ಕನ್ನಡದ ಮೌಲಿಕ ಪ್ರಕಾಶಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ನಡೆಯುತ್ತಿದೆ. ಈ ಬಾರಿ ವೈ.ಎ. ದಂತಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.