ಪ್ರಕಾಶಕರ ಮಧ್ಯೆ ಸ್ಪರ್ಧೆಯಿಂದ ಗುಣಮಟ್ಟ ಹೆಚ್ಚಳ, ಗೌರವ ಸ್ವೀಕರಿಸಿದ ವೈ.ಎ. ದಂತಿ ಅಭಿಪ್ರಾಯ

IMG-20230917-WA0028-1.jpg
Published on

ಹುಬ್ಬಳ್ಳಿ: ಪ್ರಕಾಶಕರೊಬ್ಬರು ಮತ್ತೊಬ್ಬ ಪ್ರಕಾಶನ ಸಂಸ್ಥೆಯವರ ಸಾಧನೆ ಗುರುತಿಸಿ ಅವರಿಗೆ ಗೌರವ ನೀಡುವ ಸಂಪ್ರದಾಯ ಅತ್ಯಂತ ಸಂತೋಷ ತರುವ ಸಂಗತಿ ಎಂದು ಸಾಗರದ ರವೀಂದ್ರ ಪುಸ್ತಕಾಲಯದ ವೈ.ಎ. ದಂತಿ ಹೇಳಿದರು.

ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 25ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಪುಸ್ತಕ ವ್ಯಾಪಾರ ಎಂದ ಮೇಲೆ ಅಲ್ಲಿ ವ್ಯವಹಾರ, ತಿರಸ್ಕಾರ, ಪ್ರೀತಿ ಎಲ್ಲವೂ ಇರುತ್ತದೆ. ಇವುಗಳ ಮಧ್ಯೆಯೂ ಪ್ರಕಾಶಕರ ನಡುವೆ ಗುಣಮಟ್ಟಕ್ಕಾಗಿ ಸ್ಪರ್ಧೆ ಏರ್ಪಟ್ಟರೆ ಅದು ಒಳ್ಳೆಯದು. ಅದರಿಂದ ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಪುಸ್ತಕಗಳು ಸಿಗುತ್ತವೆ ಎಂದರು.

ಹಣ ಗಳಿಸುವುದಕ್ಕಾಗಿ ನಾನು ಪ್ರಕಾಶನ ಸಂಸ್ಥೆ ನಡೆಸಲಿಲ್ಲ. ಪ್ರಕಾಶನದಲ್ಲಿ ಸಿಕ್ಕಷ್ಟು ಸಂತೋಷ ಬೇರೆ ಯಾವುದೇ ಕೆಲಸದಲ್ಲೂ ಸಿಕ್ಕಿಲ್ಲ. ಏನೇ ಕಷ್ಟ ಬಂದರೂ ಕನ್ನಡ ಪುಸ್ತಕಗಳ ಪರಿಚಾರಿಕೆ ಕೆಲಸ ನಿಲ್ಲಿಸಿಲ್ಲ. ಆಧುನಿಕ ಯುಗದಲ್ಲಿ ಮೊಬೈಲ್, ಟಿವಿಗಳ ಮಧ್ಯೆಯೂ ಓದುಗರು, ಪುಸ್ತಕ ಪ್ರೇಮಿಗಳು ಕಡಿಮೆಯಾಗಿಲ್ಲ ಎಂದರು.

ಮರದಿಂದ ಮಣ್ಣಿಗೆ ಶಕ್ತಿ: ಮರಗಳ ಅಭಿವೃದ್ಧಿಯ ಮರು ವಿಮರ್ಶೆ ಕುರಿತು ಉಪನ್ಯಾಸ ನೀಡಿದ ಲೇಖಕ, ಪರಿಸರ ತಜ್ಞರಾದ ಶಿವಾನಂದ ಕಳವೆ ಅವರು, ಬರ ಓಡಿಸಲು ಮರ ಬೇಕು, ಮರಗಳಿದ್ದಲ್ಲಿಯೇ ನದಿ ಹುಟ್ಟುತ್ತದೆ. ಭೂಮಿಯ ಮೇಲೆ ಮಣ್ಣಿಗೆ ಶಕ್ತಿ ಬರಬೇಕಾದರೆ ಮರಗಳು ಬೇಕು. ಆದರೆ, ವಿಪರ್ಯಾಸವೆಂದರೆ ಮನುಷ್ಯ ಬೆಳೆಯುತ್ತ ಹೋದಂತೆ ಮರಗಳ ಸಂಖ್ಯೆ ಇಳಿಯುತ್ತ ಹೋಗುತ್ತಿದೆ ಎಂದರು.

ಅರಣ್ಯ ಸಂರಕ್ಷಣೆ ಮಾಡಬೇಕಾದರೆ ಸಂಕಲ್ಪ ಬೇಕು. ಅಶ್ವತ್ಥ, ಅರಳಿ ಮರ ಕಂಡರೆ ಕೈ ಮುಗಿಯುತ್ತೇವೆ. ಇದೇ ಭಾವನೆಯು ಅರಣ್ಯ ಹಾಗೂ ಕಾಡು ಸಂರಕ್ಷಣೆ ಸಂದರ್ಭದಲ್ಲಿ ಬರಬೇಕು ಎಂದು ಸಲಹೆ ನೀಡಿದರು.

ಪುಸ್ತಕ ಬಿಡುಗಡೆ: ಡಾ. ಡಿ.ವಿ. ಗುರುಪ್ರಸಾದ, ಡಾ. ಬಾಬು ಕೃಷ್ಣಮೂತಿರ್, ಡಾ. ನಾ. ಮೊಗಸಾಲೆ, ಶಿವಾನಂದ ಕಳವೆ ಸೇರಿದಂತೆ ವಿವಿಧ ಲೇಖಕರ ಸುಮಾರು 10 ಪುಸ್ತಕಗಳನ್ನು ಗಂಗಾವತಿ ಪ್ರಾಣೇಶ ಅವರು ಬಿಡುಗಡೆ ಮಾಡಿದರು. ಶಿವಮೊಗ್ಗ ಜಿಲ್ಲೆ ಸಾಗರದ ರವೀಂದ್ರ ಪುಸ್ತಕಾಲಯದ ಯಲ್ಲಪ್ಪ ಅಪ್ಪಾರಾವ್ ದಂತಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಅತಿಥಿಯಾಗಿದ್ದ ಕನ್ನಡದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರು ಮಾತನಾಡಿದರು.

ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಅಧ್ಯಕ್ಷತೆ ವಹಿಸಿದ್ದರು. ಕೋಮಲ ನಾಡಿಗೇರ ಮತ್ತು ತಂಡದವರು ಭಾವಗೀತೆ ಪ್ರಸ್ತುತಪಡಿಸಿದರು. ಸ್ವಸ್ತಿ ಪ್ರಾರ್ಥನೆ ಹಾಡಿದರು. ಸಾಹಿತ್ಯ ಭಂಡಾರದ ಎಂ.ಎ. ಸುಬ್ರಹ್ಮಣ್ಯ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಮಾಳವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net