ಆಳವಾದ ಅಧ್ಯಯನದಿಂದ ಸಾಹಿತ್ಯ ಕೃಷಿ,  ಲೇಖಕಿ ಸಹನಾ ವಿಜಯಕುಮಾರ ಅಭಿಮತ,  ಮಾಗಧ ಹೊಸ ಕಾದಂಬರಿ ಓದುಗರೊಂದಿಗೆ ಸಂವಾದ

IMG_20250105_182346_440.jpg
Published on

ಹುಬ್ಬಳ್ಳಿ: ಕೇವಲ ಓದಿ ಅಭ್ಯಾಸ ಇದ್ದ ನಾನು ಬರೆಯಲು ಆರಂಭಿಸಿದ್ದು ದಶಕದಿಂದ ಈಚೆಗೆ, ಯಾವುದೇ ಸಾಹಿತ್ಯ ರಚನೆ ಮಾಡಬೇಕಾದರೆ ಆಳವಾದ ಅಧ್ಯಯನ ಅಗತ್ಯವಾಗಿದೆ, ಅಧ್ಯಯನ ಗಟ್ಟಿಯಾಗಬೇಕು, ಕ್ಷೇತ್ರ ಕಾರ್ಯವೂ ಬೇಕು, ಅಂದಾಗಲೇ ಧೈರ್ಯವಾಗಿ ಬರೆಯಲು ಸಾಧ್ಯವಾಗುತ್ತದೆ ಎಂದು ಜನಪ್ರಿಯ ಲೇಖಕಿ, ಕಾದಂಬರಿಕಾರ್ತಿ ಸಹನಾ ವಿಜಯಕುಮಾರ ಹೇಳಿದರು.

ಇಲ್ಲಿಯ ಕೊಪ್ಪಿಕರ ರಸ್ತೆಯಲ್ಲಿರುವ ಸಾಹಿತ್ಯ ಭಂಡಾರದ "ಅನಂತ ಮಹಡಿಯಲ್ಲಿ' ಭಾನುವಾರ ಸಂಜೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಮಾಗಧ' ಹೊಸ ಕಾದಂಬರಿ ಬಿಡುಗಡೆಯಾಗಿ ತಿಂಗಳೊಳಗೆ ಮೂರು ಬಾರಿ ಮರು ಮುದ್ರಣ ಕಂಡಿದೆ. ದೊಡ್ಡ ಗಾತ್ರದ ಕಾದಂಬರಿ ಬರೆಯಲು ಎಸ್.ಎಲ್. ಭೈರಪ್ಪನವರ ಮಾರ್ಗದರ್ಶನ ಬಹಳಷ್ಟಿದೆ. ಅವರನ್ನು ಭೇಟಿ ಮಾಡಿದ ನಂತರವೇ ಬರೆಯಲು ಶುರು ಮಾಡಿದ್ದು ಎಂದು ಕೃತಿಯ ಹಿನ್ನೆಲೆಯನ್ನು ತಿಳಿಸಿದರು.

ರೀಲ್ಸ್, ಶಾರ್ಟ್ಸಗಳ ಈ ಕಾಲದಲ್ಲಿ ಓದಲು ಯಾರಿಗೂ ಸಮಯ ಇಲ್ಲ. ಆದರೆ, ಈಗಿನ ಓದುಗರೆಲ್ಲರೂ ಪ್ರಾಜ್ಞರು, ಲೇಖಕರಿಗಿಂತ ದೊಡ್ಡವರು, ಅವರಲ್ಲಿ ಯಾವುದೇ ಸಂಶಯಗಳು ಉಳಿಯದಂತೆ ಬರೆಯುವುದು ಅಷ್ಟೇ ಸವಾಲಿನ ಕೆಲಸ ಎಂದರು.

ಐಟಿ ಕಂಪನಿಯ ಉದ್ಯೋಗಿಯಾಗಿದ್ದ ನಾನು ಸಾಹಿತ್ಯ ಕೃಷಿಗಾಗಿಯೇ ಕೆಲಸ ಬಿಟ್ಟಿದ್ದೇನೆ. ಏಕೆಂದರೆ ಯಾವುದೇ ಕೆಲಸವನ್ನು ಮಾಡುವಾಗ ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಳ್ಳಬೇಕು. ಜೀವನಾನುಭವವೂ ಅಷ್ಟೇ ಮುಖ್ಯ. ವಿಷಯ ಮನನ ಆದ ನಂತರವೇ ಬರೆಯುವುದು ಸೂಕ್ತ. ಅದನ್ನೇ ಮಾಗಧ ಬರೆಯುವಾಗ ಪಾಲಿಸಿದ್ದೇನೆ ಎಂದು ಪ್ರತಿಪಾದಿಸಿದರು.

ನನ್ನ ಮೊದಲ ಕಾದಂಬರಿ ಕ್ಷಮೆ ಇದೀಗ ಸಿನಿಮಾ ಆಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ ಅವರು ಅದಕ್ಕೆ ಚಿತ್ರದ ರೂಪ ನೀಡುತ್ತಿದ್ದಾರೆ. ಆರಂಭದ ಮೂರು ಕಾದಂಬರಿಗಳನ್ನು ಬರೆಯುವಾಗ ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ, ಆತಂಕ ಇದ್ದೇ ಇತ್ತು. ಸಾಹಿತ್ಯ ರಚನೆ ಸಂದರ್ಭದಲ್ಲಿ ಅನೇಕ ವಿಷಯಗಳು ನಮಗೆ ತಿಳಿಯದೇ ಇರಬಹುದು, ಆಗ ತಿಳಿದವರಿಗೆ ತೋರಿಸಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕೂಲಂಕಷ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಕಲ್ಪನಾ ಶಕ್ತಿಯೂ ಬೇಕು:
ಇಂದಿನ ಮಕ್ಕಳಿಗೆ ಪಠ್ಯದಲ್ಲಿ ಇತಿಹಾಸ ಕಡಿಮೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಿಂದಿನ ಟನಾವಳಿಗಳ ಬಗ್ಗೆ ಅಷ್ಟಾಗಿ ಜ್ಞಾನ ಸಿಗುತ್ತಿಲ್ಲ. ಸಾಹಿತ್ಯ ರಚನೆಗೆ ಅದ್ಭುತ ಕಲ್ಪನಾ ಶಕ್ತಿಯೂ ಬೇಕು. ನನ್ನ ಸಾಹಿತ್ಯದಲ್ಲಿ ಭೈರಪ್ಪ ಅವರ ಪ್ರಭಾವ ಇರುವುದು ಸಹಜ. 2014ರಲ್ಲಿ ಸಾಹಿತ್ಯ ಕೃಷಿ ಆರಂಭಿಸಿದೆ. 2016ರಲ್ಲಿ ಮೊದಲ ಕಾದಂಬರಿ ಬರೆದೆ. ಅದು ಈಗ ಚಲನಚಿತ್ರವಾಗುತ್ತಿದೆ. ಕೆಲವು ಕೃತಿಗಳು ಮರಾಠಿಗೆ ಭಾಷಾಂತರವಾಗಿವೆ ಎಂದು ಸಂವಾದದಲ್ಲಿ ವಿವರಿಸಿದರು.

ಸಂಸ್ಕೃತವನ್ನು ಬಿಟ್ಟು ಬರೆಯಲು ಸಾಧ್ಯವಿಲ್ಲ. ಇಂಗ್ಲಿಷ್ ನಲ್ಲಿ ಭಾಷಾಂತರವಾದ ಸಾಹಿತ್ಯವು ಅಷ್ಟಾಗಿ ನಂಬಿಕೆಗೆ ಅರ್ಹವಲ್ಲ. ನಮ್ಮ ಧರ್ಮದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು. ಯಾವುದೇ ಐಡಿಯಾಲಜಿ ಇರಲಿ ಸತ್ಯವನ್ನು ಬಿಟ್ಟು ಹೋಗಬಾರದು ಎಂದರು.

ಸಾಹಿತ್ಯ ಭಂಡಾರದ ಎಂ.ಎ. ಸುಬ್ರಮಣ್ಯ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಾಗಧ ಕಾದಂಬರಿ ಬಗ್ಗೆ ಇನ್ನಷ್ಟು ಓದುಗರೊಂದಿಗೆ ಮತ್ತೊಮ್ಮೆ ಸಂವಾದ ಏರ್ಪಡಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net