ಧಗ್ರಾಯೋ ಮಹಿಳೆಯರ ಪಾಲಿನ ಅಕ್ಷಯ ಪಾತ್ರೆ ಇದ್ದಂತೆ

Published on

ಮಾಯಕೊಂಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಸಾಹಿತಿ ಐ.ಟಿ. ಶಿವಕುಮಾರ್ ಹೇಳಿದರು.

ಮಾಯಕೊಂಡ ಹೋಬಳಿ ಕಬ್ಬೂರು ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ನೂತನ ಜ್ಞಾನಜ್ಯೋತಿ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಡಾ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅವರು ಧಗ್ರಾಯೋ ಮೂಲಕ ನಾಡಿನ ಉದ್ದಗಲಕ್ಕೂ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಆರ್ಥಿಕ ನೆರವು ನೀಡಿ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದ್ದಾರೆ ಎಂದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಕುಟುಂಬ ಯಶಸ್ಸಿನತ್ತ ಸಾಗಲು ಸಾಧ್ಯ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಸಂಸ್ಕೃತಿ- ಸಂಸ್ಕಾರಗಳನ್ನು ಪಾಲಿಸಿದರೆ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.

ಧಗ್ರಾಯೋ ತಾಲೂಕು ಯೋಜನಾಧಿಕಾರಿ ಸತೀಶ್ ಮಾತನಾಡಿ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಕಾನೂನು, ಶಿಕ್ಷಣ, ಆರೋಗ್ಯ, ಸ್ವ ಉದ್ಯೋಗ, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಸೇರಿ ಹಲವಾರು ವಿಚಾರಗಳ ಕುರಿತು ಮಾಹಿತಿ ನೀಡುವ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷ ಶಂಭುಲಿಂಗಪ್ಪ , ಉಪಾಧ್ಯಕ್ಷೆ ಸಾವಿತ್ರಮ್ಮ , ಕಾರ್ಯದರ್ಶಿ ಚಂದ್ರಮ್ಮ, ಪದಾಧಿಕಾರಿ ಕವಿತಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರತಿಭಾ, ಮೇಲ್ವಿಚಾರಕ ಗಿರೀಶ್, ಸೇವಾ ಪ್ರತಿನಿಧಿ ರಾಧಾ ಹಾಗೂ ಜ್ಞಾನಜ್ಯೋತಿ ಜ್ಞಾನವಿಕಾಸ ಕೇಂದ್ರದ ಎಲ್ಲ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net