ತುಮಕೂರು ಜಿಲ್ಲೆಯ ನಾಲ್ವರಿಗೆ ಸಾಹಿತ್ಯ ಅಕಾಡೆಮಿ ಗರಿ

S_G_Makkalli
Published on

ತುಮಕೂರು: ಜಿಲ್ಲೆಯಲ್ಲಿ ಸಾಹಿತ್ಯ ಕೃಷಿಯ ಶ್ರೀಮಂತಿಕೆಗೆ ಮೆರುಗು ಬಂದಿದೆ, ಸಂಶೋಧಕ, ಮನಸ್ಸಿನ ವಿಶ್ಲೇಷಕ, ಸಂಸ್ಕೃತಿಯ ಚಿಂತಕ ಪ್ರೊ.ಕೆ.ಜಿ.ನಾಗರಾಜಪ್ಪ, ಹಿರಿಯ ಲೇಖಕ ಎಸ್.ಗಂಗಾಧರಯ್ಯ ಹಾಗೂ ಅವರ ಮಗಳು ಯುವ ಸಾಹಿತಿ ಸ್ಮಿತಾ ಮಾಕಳ್ಳಿ ಮತ್ತು ನಾಗಲಮಡಿಕೆ ಸುರೇಶ್ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಧೀಮಂತ ವೈಚಾರಿಕ, ಸಾಮಾಜಿಕ ನಿಲುವುಗಳ ಸೂಕ್ಷ್ಮ ವಿಮರ್ಶಕ, ಗಂಭೀರ ಸಂಸ್ಕೃತಿಯ ಚಿಂತಕ ಪ್ರೊ.ಕೆಜಿಎನ್ ಅವರ ಅನುಶ್ರೇಣಿ ಯಜಮಾನಿಕೆ ಸಾಹಿತ್ಯ ವಿಮರ್ಶೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಹಿರಿಯ ಲೇಖಕ ಎಸ್.ಗಂಗಾಧರಯ್ಯ ಅವರ ‘ದೇವರ ಕುದುರೆ’ ಕಥಾಸಂಕಲನ 2018ನೇ ಸಾಲಿನಲ್ಲಿ ಸಾಹಿತ್ಯ ಅಕಾಡೆಮಿ ಕೊಡಮಾಡುವ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಉದಯೋನ್ಮುಖ ಪ್ರತಿಭೆಯಾಗಿರುವ ಸ್ಮಿತಾ ಮಾಕಳ್ಳಿ ಅವರ ‘ಹಸ್ತಪ್ರತಿ’ ಒಂದು ಅಂಕ ಮುಗಿದು ಕೃತಿಗೆ ದತ್ತಿ ಬಹುಮಾನ ಲಭಿಸಿದೆ. ಯುವ ವಿಮರ್ಶಕ ಸುರೇಶ ನಾಗಲಮಡಿಕೆ ಅವರ ‘ಹಲವು ಬಣ್ಣಗಳ ಹಗ್ಗ’ ಕೃತಿ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಆಗಿದೆ.

ಹಿರಿಯ ಲೇಖಕ ಎಸ್.ಗಂಗಾಧರಯ್ಯ: ಚಿಕ್ಕನಾಯಕನಹಳ್ಳಿ ತಾಲೂಕು ಮಾಕುವಳ್ಳಿ ಎಸ್.ಗಂಗಾಧರಯ್ಯ ಖ್ಯಾತ ಕಥೆಗಾರ. ಪ್ರಸ್ತುತ ಮತಿಘಟ್ಟದ ಶ್ರೀ ಜಯಭಾರತಿ ವಿದ್ಯಾಪೀಠ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಕ. ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ ಅವರ ಕಥಾ ಸಂಕಲನಗಳು, ಬಯಲ ಪರಿಮಳ ವ್ಯಕ್ತಿಚಿತ್ರ ಸಂಪುಟ ಜನಮೆಚ್ಚುಗೆ ಗಳಿಸಿದೆ. ವೈಕಂ ಕಥೆಗಳು, ಲೋರ್ಕಾ ನಾಟಕ-ಎರ‌್ಮಾ, ಲೋರ್ಕಾ ಕಾವ್ಯ-ಚರಮಗೀತೆ, ಹಲವು ರೆಕ್ಕೆಯ ಹಕ್ಕಿ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ ಬೇಟೆಗಾರನ ಚಿತ್ರಗಳು, ದಾರಿಯೋ ಫೋ ನಾಟಕ-ಗುಲಾಬಿ ಗರ್ಭ, ಮಾರ್ಕ್ವೆಜ್ ಸಂದರ್ಶನ-ಸೀಬೆ ಸೊಗಡು, ಚಿಂಗೀಝ್ ಐತ್ಮತೋವ್ ಕಾದಂಬರಿ ‘ಜಮೀಲಾ ಅನುವಾದ ಕಥೆಗಳು ಅವರ ಸಾಹಿತ್ಯ ಕೃಷಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.

ಪ್ರಮುಖ ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ (1996), ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಅನಂತಮೂರ್ತಿ ಕಥಾ ಪ್ರಶಸ್ತಿ(2018)

ಉದಯೋನ್ಮುಖ ಲೇಖಕಿ ಸ್ಮಿತಾ ಮಾಕಳ್ಳಿ: ಸ್ಮಿತಾ ಮಾಕಳ್ಳಿ ತಂದೆಯ ಜತೆಯಲ್ಲಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ ಎನ್ನಿಸಿದೆ. ಬಾಲ್ಯದಿಂದಲೂ ಸಾಹಿತ್ಯದ ಮೇಲೆ ಒಲವು ಬೆಳೆಸಿಕೊಂಡಿರುವ ಸ್ಮಿತಾ ಉದಯೋನ್ಮುಖ ಲೇಖಕಿಯಾಗಿ ಗುರುತಿಸಿಕೊಂಡಿದ್ದು ಹಲವು ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿಗಳು: ಕುವೆಂಪು ವಿವಿಯಲ್ಲಿ ‘ಭಾಷೆವಿಷ್ ಸಿಂಗರ್‌ನ ಕಥೆಗಳ ಕುರಿತು ಪಿಎಚ್‌ಡಿ ಮಾಡುತ್ತಿರುವ ಸ್ಮಿತಾ ಅವರ ‘ಕೈಗೆಟಕುವ ಕೊಂಬೆ’ಕೃತಿಗೆ 2012ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಲಭಿಸಿದೆ, 2017ರಲ್ಲಿ ಅರಳು ಸಾಹಿತ್ಯ ಪ್ರಶಸ್ತಿ, ದಿನಪತ್ರಿಕೆಗಳ ಕಥಾ ಸ್ಫರ್ಧೆಯಲ್ಲಿ ಪ್ರಶಸ್ತಿ ಹಾಗೂ ಕ್ರೈಸ್ಟ್ ಕಾಲೇಜಿನ ಕವನ ಸ್ಫರ್ಧೆಯಲ್ಲಿ ಬಹುಮಾನ ಬಂದಿದೆ.

ಸಂಶೋಧಕ ಮನಸ್ಸಿನ ವಿಶ್ಲೇಷಕ ಪ್ರೊ.ಕೆಜಿಎನ್‌ಗೆ ಗೌರವ ಪ್ರಶಸ್ತಿ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆ ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಸಂಶೋಧಕ, ಮನಸ್ಸಿನ ವಿಶ್ಲೇಷಕ, ಸಂಸ್ಕೃತಿಯ ಚಿಂತಕ ಪ್ರೊ.ಕೆ.ಜಿ.ನಾಗರಾಜಪ್ಪ ಭಾಜನರಾಗಿದ್ದಾರೆ. ದೊಡ್ಡ ಸಂಕಣ್ಣನಾಯಕ, ದೇವಾಂಗ ಸಂಸ್ಕೃತಿ ಒಂದು ಅಧ್ಯಯನ, ಮರುಚಿಂತನೆ, ಭಕ್ತಿಸಾಹಿತ್ಯದಲ್ಲಿ ಪ್ರತಿಭಟನೆಯ ವಿಧಾನಗಳು, ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಹಿಂಸೆಯ ಅಭಿವೃಕ್ತಿಯ ಸ್ವರೂಪ ಹಾಗೂ ಇಕ್ಕಟ್ಟು-ಬಿಕ್ಕಟ್ಟು ಕೆಜಿಎನ್ ಅವರ ಸ್ವತಂತ್ರ ಕೃತಿಗಳು. ಶಿವಕುಮಾರ ವಾಣಿ, ವೀರಕುಮಾರ, ಸಂಗ್ರಾಮ, ಜಚನಿ ಸಾಹಿತ್ಯ ಸಮ್ಮಿಶ್ರ, ಜಚನಿ ಸಾಹಿತ್ಯ ಕೈವಲ್ಯ ಪದ್ಧತಿ ಪ್ರದೀಪಿಕೆ ಸಂಪಾದಿತ ಕೃತಿಗಳು.

ರಹಸ್ಯ ಪಂಥಗಳು, ಮಾಲಿನಿ ವಿಜಯೋತ್ಸವ ತಂತ್ರ, ಅಂಬೇಡ್ಕರ್ ನಂತರ ವಿಮೋಚನಾ ಚಳವಳಿಗಳು, ತಮಿಳು ಶೈವ ಮತ್ತು ಹರಿಹರ, ಜಿಎಸ್‌ಎಸ್ ಸಾಹಿತ್ಯದ ವೈಚಾರಿಕ ನೆಲೆಗಳು, ಭೈರಪ್ಪನವರ ಸಾರ್ಥ- ಒಂದು ತಾತ್ವಿಕ ಚಿಂತನೆ, ಶಾಸ್ತ್ರ ಸಂಪ್ರದಾಯ ಹಾಗೂ ಅಲ್ಲಮಪ್ರಭು ಪ್ರೊ.ಕೆಜಿಎನ್ ಅವರ ಮಿಮರ್ಶಾತ್ಮಕ ಲೇಖನಗಳು.

ಹಲವು ಪ್ರಶಸ್ತಿ: ಸಾಹಿತ್ಯ ಕ್ಷೇತ್ರದಲ್ಲಿನ ಅಸಾಧಾರಣ ಕೃಷಿಗೆ ಪ್ರೊ.ಕೆ.ಜಿ.ನಾಗರಾಜಪ್ಪ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. 2018ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, 2011ರಲ್ಲಿ ನಾಡೋಜ, 2015ರಲ್ಲಿ ಕನ್ನಡ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಸಿದ್ಧಗಂಗಾ ಶಿವಕುಮಾರಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತುಮಕೂರು ತವನಿಧಿ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿಗಳು ಪ್ರೊ.ಕೆಜಿಎನ್ ಮುಡಿಗೇರಿವೆ.

ಕೆಜಿಎನ್ ಕಲ್ಲೂರಿನವರು: ನಾಗರಾಜಪ್ಪ ಗುಬ್ಬಿ ತಾಲೂಕಿನ ಕಲ್ಲೂರಿನವರು. 1934ರ ಜನವರಿ 9ರಂದು ಜನಿಸಿದ ಕೆಜಿಎನ್ ಅವರ ತಂದೆ ಮೇಸ್ತ್ರಿ ಗಂಗಪ್ಪ, ತಾಯಿ ಲಕ್ಷ್ಮಮ್ಮ. ಇಬ್ಬರೂ ಅನಕ್ಷರಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿವಿಯಲ್ಲಿ ಪಡೆದ ಕೆಜಿಎನ್ 1960ರಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. 1963ರಲ್ಲಿ ಮೈಸೂರಿನ ರಾಮಕೃಷ್ಣ ಪಿಯು ಕಾಲೇಜು ಉಪನ್ಯಾಸಕರಾಗಿ ಸೇರಿದ ನಂತರ ತನಗೆ ಅನ್ನ, ಜ್ಞಾನ ದಾಸೋಹ ನೀಡಿದ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆಯಿಂದ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸೇರಿದರು.

ಪ್ರಶಸ್ತಿ, ಗೌರವಗಳು ಜವಾಬ್ದಾರಿ ಹೆಚ್ಚಿಸುತ್ತವೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಗಳೊಟ್ಟಿಗೆ ಲಭಿಸಿರುವುದು ಖುಷಿ ಹೆಚ್ಚು ಮಾಡಿದೆ. ಜನರ ಬದುಕಿನೊಂದಿಗೆ ಬೆಸೆದಿರುವ ಸಾಹಿತ್ಯ ಕೃಷಿಗೆ ಅಕಾಡೆಮಿ ಗುರುತಿಸಿರುವುದು ನಮ್ಮ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದೆ. ಎಸ್.ಗಂಗಾಧರಯ್ಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net