ಉರಿಗೌಡ, ನಂಜೇಗೌಡ ಹೆಸರು ಬಿಜೆಪಿ ಸೃಷ್ಟಿ: ಸಾಹಿತಿ ಡಾ.ಮುಕುಂದರಾಜ್ ವಾಗ್ದಾಳಿ

Mandya
Published on

ಮಂಡ್ಯ: ಟಿಪ್ಪುವಿನ ಸಾಧನೆಗಳನ್ನು ಮರೆಮಾಚಲು ಉರಿಗೌಡ ಹಾಗೂ ನಂಜೇಗೌಡ ಎಂಬ ಇಬ್ಬರು ವ್ಯಕ್ತಿಗಳನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿಗಳು ಸೃಷ್ಟಿ ಮಾಡಿವೆ. ಸಂಘ ಪರಿವಾರದ ಮುಖಂಡರು ಈ ಬಗ್ಗೆ ಇಲ್ಲಸಲ್ಲದ ಕಟ್ಟುಕಥೆಗಳನ್ನು ಎಣಿದು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ಡಾ. ಮುಕುಂದರಾಜ್ ಆರೋಪಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾಡುತ್ತಿರುವುದು ವೈದಿಕ ಹಾಗೂ ಜಾತಿ ರಾಜಕಾರಣ. ಇದನ್ನು ಈ ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು. ಇದುವರೆಗೆ ದಾಖಲಾಗಿರುವ ಟಿಪ್ಪುವರೆಗಿನ ಇತಿಹಾಸದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ವ್ಯಕ್ತಿಗಳ ಹೆಸರುಗಳು ಎಲ್ಲಿಯೂ ಕಂಡು ಬರುವುದಿಲ್ಲ. ಈ ಹೆಸರುಗಳನ್ನು ಉದ್ದೇಶ ಪೂರ್ವಕವಾಗಿಯೇ ತೇಲಿ ಬಿಡಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಕೊಲೆ ಗಡುಕರೆಂದು ಬಿಂಬಿಸಿ ವೈದಿಕರೇ ಶ್ರೇಷ್ಟವೆಂದು ಹೇಳಲು ಹೊರಟಿವೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

18ನೇ ಶತಮಾನದಲ್ಲಿಯೇ ಟಿಪ್ಪುವಿನ ಜೀವನ ಚರಿತ್ರೆ, ಹೋರಾಟಗಳು ಮತ್ತು ಸಾಧನೆಗಳು ಜನಪದರ ಲಾವಣಿಗಳಲ್ಲಿ ದಾಖಲಾಗಿವೆ. ಇವುಗಳು ಪ್ರಮುಖವಾದ ಮೌಖಿಕ ಸಾಹಿತ್ಯಾಧಾರಗಳಾಗಿವೆ. ಇವುಗಳನ್ನು ಯಾರು ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ದರಿಂದ ನೂರು ಬಾರಿ ಸುಳ್ಳುಗಳನ್ನು ಹೇಳಿ ಸತ್ಯವೆಂದು ನಿರೂಪಿಸಲು ಸಾಧ್ಯವಿಲ್ಲ. ಟಿಪ್ಪು ದೀನ-ದಲಿತರು, ಹಿಂದುಳಿದವವರಿಗೆ ಭೂಮಿ ಹಂಚಿಕೆ ಮಾಡಿದ್ದ. ಅಲ್ಲದೆ, ಶ್ಯಾನುಭೋಗರ ದುರಾಡಳಿತ ಹೆಚ್ಚಿದಾಗ ಶೂದ್ರ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಪಟೇಲರು ಮತ್ತು ಗೌಡರನ್ನಾಗಿ ನೇಮಿಸಿದ್ದ. ಈ ಕ್ರಮಗಳು ಟಿಪ್ಪುವಿನ ಜನಪರ ಕಾರ್ಯಗಳಿಗೆ ಸಾಕ್ಷಿಯಾಗಿವೆ. ಇಂತಹ ಉದಾರ ಮನೋಭಾವದ ಟಿಪ್ಪುವನ್ನು ಕೆಲವರು ರಾಜಕೀಯ ತೆವಲಿಗಾಗಿ ಖಳನಾಯಕನಂತೆ ಚಿತ್ರಿಸಲು ಹೊರಟ್ಟಿದ್ದಾರೆ. ಆದ್ದರಿಂದ ಈ ಬಗ್ಗೆ ನಾಡಿನ ಜನರು ಎಚ್ಚರಿಕೆಯಿಂದಿರಬೇಕೆಂದು ಅವರು ಹೇಳಿದರು.

ಇಬ್ಬರ ವಂಶಸ್ಥರೆಲ್ಲದ್ದಾರೆ?: ಇತಿಹಾಸ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಟಿಪ್ಪು ಕೊಂದವರು ಉರಿನಂಜೇಗೌಡ ಹಾಗೂ ದೊಡ್ಡನಂಜೇಗೌಡ ಎಂಬುದು ಶುದ್ಧ ಸುಳ್ಳು. ಟಿಪ್ಪು ಕೊಂದವರು ಯಾರು ಎನ್ನುವುದು ಈವರೆವಿಗೂ ತಿಳಿದಿಲ್ಲ. ಕೆಲವರು ಈ ಬಗ್ಗೆ ಗೊಂದಲ ಮೂಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇತಿಹಾಸ ತಿರುಚುವ ಕೆಲಸ ಸರಿಯಲ್ಲ ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶೂದ್ರ ಸಮುದಾಯದವರ ಏಳಿಗೆಗಾಗಿ ಟಿಪ್ಪು ಹಲವು ಕೊಡುಗೆಗಳನ್ನು ನೀಡಿದ್ದಾನೆ. ಒಕ್ಕಲು ಮಾಡುವ ರೈತರಿಂದ ಕೇವಲ ಕಂದಾಯ ಪಡೆಯುತ್ತಿದ್ದರೇ ಹೊರತು ಅವರ ಹೆಸರಿಗೆ ಜಮೀನು ಮಾಡಿರಲಿಲ್ಲ. ಪಹಣಿ, ಪಟ್ಟೆ ಸೇರಿದಂತೆ ಹಲವು ಹೆಸರುಗಳನ್ನು ಜಾರಿಗೆ ತಂದವನೇ ಟಿಪ್ಪು. ಅಲ್ಲಿಯವರೆಗೆ ಈ ರೀತಿಯ ಪದಗಳು ಇರಲಿಲ್ಲ ಎಂದು ಉದಾಹರಣೆ ಸಮೇತ ವಿವರಿಸಿದರು.

ಶೂದ್ರ ಸಮುದಾಯದವರು ಟಿಪ್ಪು ಮೇಲೆ ವಿಶ್ವಾಸ ಇರಿಸಿದ್ದರು. ಒಂದು ಪ್ರದೇಶದ ರಾಜನಾದವನು ತನ್ನ ವಿರೋಧಿಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲುತ್ತಿದ್ದನು. ಇದರಲ್ಲಿ ಟಿಪ್ಪು ಸಹ ಹೊರತಾಗಿರಲಿಲ್ಲ. ದಕ್ಷಿಣ ಭಾರತದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ಟಿಪ್ಪುವನ್ನು ಉರಿಗೌಡ, ದೊಡ್ಡನಂಜೇಗೌಡ ಅವರು ಕೊಂದಿದ್ದಾರೆ ಎಂದರೆ ಅವರು ದೇಶದ್ರೋಹಿಗಳಾಗುತ್ತಾರೆ. ಒಂದು ವೇಳೆ ಅವರಿಬ್ಬರೇ ಕೊಂದಿದ್ದರೆ ಅವರ ವಂಶಸ್ಥರು ಎಲ್ಲಿದ್ದಾರೆ?. ಮಾತ್ರವಲ್ಲದೆ ರಾಜರ ಆಳ್ವಿಕೆಯಲ್ಲಿ ರಾಜನನ್ನು ಕೊಂದವರಿಗೆ ಸಾಮಾಜ್ರೃ ಆಳುವ ಅವಕಾಶ ಇರುತ್ತಿತ್ತು. ಆದ್ದರಿಂದ ಟಿಪ್ಪು ನಂತರ ಈ ಇಬ್ಬರು ಒಕ್ಕಲಿಗರು ಅಧಿಕಾರ ಮಾಡಬೇಕಿತ್ತಲ್ಲವೇ?. ಆದ್ದರಿಂದ ಅವರಿಬ್ಬರು ಟಿಪ್ಪುವನ್ನು ಕೊಂದಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಈ ಕುರಿತು ಚರ್ಚೆಗೆ ಸಿದ್ಧವಿದ್ದೇವೆ ಎಂದು ಸವಾಲು ಹಾಕಿದರು.

ಸಾಹಿತಿ ಕಾಳೇಗೌಡ ನಾಗವಾರ, ವಕೀಲ ರಮೇಶ್‌ಗೌಡ, ರೇಣುಕಮ್ಮ ಭಕ್ತರಹಳ್ಳಿ, ಕನ್ನಡ ಸೇನೆಯ ಮಂಜುನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net