

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ದಶಕದ ಹಿಂದೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ‘ಸಹಿ ರೀ ಸಹಿ’ ನಗೆ ನಾಟಕವನ್ನು ಪುನಃ ರಂಗದ ಮೇಲೆ ಪ್ರದರ್ಶನಕ್ಕೆ ತರಲು ಸಿದ್ಧತೆ ನಡೆಸಿದ್ದೇವೆ ಎಂದು ರಂಗಭೂಮಿ ಕಲಾವಿದ, ಹುಬ್ಬಳ್ಳಿ ಗುರು ಇನ್ಸ್ಟಿಟ್ಯೂಟ್ನ ಡಾ. ಯಶವಂತ ಸರದೇಶಪಾಂಡೆ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 5ರಂದು ಬಾಗಲಕೋಟದಲ್ಲಿ, 6ರಂದು ಸಂಜೆ 6.30ಕ್ಕೆ ಧಾರವಾಡದ ಸೃಜನಾ ರಂಗ ಮಂದಿರದಲ್ಲಿ, 7ರಂದು ಸಂಜೆ 6.30ಕ್ಕೆ ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಹೀಗೆ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸುಮಾರು 60ರಿಂದ 100 ಪ್ರದರ್ಶನಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯಿಂದ 2003-04ರಲ್ಲಿ ಮೊದಲ ಬಾರಿ ಸಹಿ ರೀ ಸಹಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಅದು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. 2012ರವರೆಗೆ ಒಟ್ಟು 500 ಪ್ರದರ್ಶನಗಳು ಕಂಡಿದ್ದವು. ಪ್ರೇಕ್ಷಕರನ್ನು ರಂಗ ಮಂದಿರಗಳಿಗೆ ಮರಳಿ ಕರೆ ತರುವ ಪ್ರಯತ್ನವಾಗಿ ಮತ್ತೊಮ್ಮೆ ಈ ನಾಟಕ ಪ್ರದರ್ಶನಕ್ಕೆ ಕೈ ಹಾಕಿದ್ದೇವೆ. ಮುಂಬೈನ ಕೇದಾರ ಶಿಂಧೆ ರಚಿಸಿದ ಈ ನಾಟಕವನ್ನು ನಾನೇ ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದೇನೆ. 2 ಗಂಟೆಯ ಈ ನಾಟಕದಲ್ಲಿ 17 ಕಲಾವಿದರು ಅಭಿನಯಿಸಿದ್ದಾರೆ ಎಂದು ವಿವರಿಸಿದರು.