ಕಲಾವಿದರಲ್ಲಿ ಸಂಸ್ಕಾರ ಬೆಳೆಸುವ ಕಲೆ: ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಅಭಿಮತ

Sahebara Circuit Drama Performance Mandya
Published on

ಮಂಡ್ಯ: ಕಲಾವಿದರಿಗೆ ಕಲೆಯಿಂದ ವಿನಯ, ಸೌಜನ್ಯ, ಶಿಸ್ತು ಜನರ ಒಡನಾಟ ಲಭಿಸುತ್ತದೆ. ಒಟ್ಟಾರೆ ಕಲಾವಿದರಲ್ಲಿ ಒಳ್ಳೆಯ ಸಂಸ್ಕಾರ ಬೆಳೆಯುತ್ತದೆ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅಭಿಪ್ರಾಯಪಟ್ಟರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕರ್ನಾಟಕ ಸಂಘದ ವತಿಯಿಂದ ಹವ್ಯಾಸಿ ಹಿರಿಯ ರಂಗಭೂಮಿ ಕಲಾವಿದ ದಿ.ಸಿ.ಎಸ್.ರಾಮಕೃಷ್ಣ ಅವರ ನೆನಪಿನಲ್ಲಿ ಆಯೋಜಿಸಿದ್ದ ’ಸಾಹೇಬರ ಸರ್ಕೀಟು’ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರಿಗೆ ಡಾ.ರಾಜಕುಮಾರ್ ಉತ್ತಮ ಉದಾಹರಣೆ. ರಂಗಭೂಮಿ, ಚಿತ್ರ ಕಲಾವಿದರಾಗಿ ಅವರು ಗಳಿಸಿದ ಕೀರ್ತಿ ಕಲಾವಿದರಿಗೆ ಮಾದರಿ. ಅವರೊಬ್ಬ ಕಲಾಕ್ಷೇತ್ರದ ಶಮಂತಕ ಮಣಿಯಾಗಿ ರೂಪುಗೊಂಡವರು ಎಂದರು.

ಕಲೆಯಿಂದ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ. ಇಂತಹ ಕಲೆ, ಕಲಾವಿದರು ಸೇರಿದಂತೆ ಇನ್ನಿತರ ಮಂಡ್ಯದ ಸಾಂಸ್ಕೃತಿಕ ಪ್ರತಿಭೆ ಪ್ರೊ.ಬಿ.ಜಯಪ್ರಕಾಶಗೌಡರು ಬೆಳೆಸುತ್ತಿದ್ದರೆ. ಇವರು ತಮ್ಮ ಬಳಿ ಬಂದಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕೇಳುತ್ತಾರೆಯೇ ಹೊರತು ತಮ್ಮ ವೈಯಕ್ತಿಕ ಹಿತಾಸಕ್ತಿ ಬಯಸುವುದಿಲ್ಲ. ಅವರ ಕನಸಿನ ಕೂಸು ಕರ್ನಾಟಕ ಸಂಘದ ರಂಗಮಂದಿರ ಶೀಘ್ರ ಪೂರ್ಣಗೊಳ್ಳಲಿ ಎಂದು ಆಶಿಸಿದರು.

ಅಲಯನ್ಸ್ ಕ್ಲಬ್ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ರಂಗಭೂಮಿ ಎಂಬುದು ಜನಸಾಮಾನ್ಯರ ವಿಶ್ವವಿದ್ಯಾನಿಲಯವಿದ್ದಂತೆ. ಅದು ಎಲ್ಲವನ್ನು ಕಲಿಸುತ್ತದೆ. ಸಂಘಟನೆಗಳು ಸ್ಥಳೀಯ ಪ್ರತಿಭೆ ಕಲೆ ಗುರುತಿಸಿ ಗೌರವಿಸುವುದು ಮುಖ್ಯ. ಕಲೆ ಕಲಾವಿದರನ್ನು ಉಳಿಸುವ ಕೆಲಸ ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ರಾಮಕೃಷ್ಣ ಅವರ ಆಶಯದ ಮೇರೆಗೆ ನಾಟಕದ ರೂಪುರೇಷೆ ರೂಪುಗೊಂಡಿತು. ಆದರೆ ಪ್ರದರ್ಶನಕ್ಕೂ ಮುನ್ನವೇ ಅವರು ತೀರಿಕೊಂಡದ್ದು ದುಃಖದ ಸಂಗತಿ. ರಂಗಭೂಮಿ ಸೌಜನ್ಯ, ಸಂಸ್ಕೃತಿ, ಪ್ರೀತಿಯನ್ನು ಬೆಳೆಸುತ್ತದೆ. ಕಲೆ ಸಾಹಿತ್ಯದ ಮೂಲಕ ಮಕ್ಕಳ ಮನಸ್ಸನ್ನು ಅರಳಿಸಬೇಕು. ಮಂಡ್ಯ ದೊಡ್ಡ ಸಾಂಸ್ಕೃತಿಕ ನಗರ ಆಗಬೇಕು ಎನ್ನುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಟಕ ಹಲವು ವಿಚಾರಗಳ ಬಹುಜನರ ಆಸಕ್ತಿ, ಮಿಶ್ರಣದ ಫಲವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಕೆ.ಚಂದ್ರಶೇಖರ್ ಮಾತನಾಡಿ, ಈ ಜಗವೇ ಒಂದು ನಾಟಕ ರಂಗವಾಗಿದ್ದು, ನಾವೆಲ್ಲ ತಾತ್ಕಾಲಿಕ ಪಾತ್ರಧಾರಿಗಳಾಗಿದ್ದೇವೆ. ನಾಗರಿಕತೆ, ಆಧುನಿಕತೆ ಮತ್ತು ಕಲೆ ಸಂಸ್ಕೃತಿಯನ್ನು ನಾಶಮಾಡುವ ಬ್ರಹ್ಮರಾಕ್ಷಸನಾಗಿದೆ. ರಂಗ ಚಟುವಟಿಕೆ ಉಳಿದರೆ ಸಾಮಾಜಿಕ ಮೌಲ್ಯಗಳು ಉಳಿಯುತ್ತವೆ ಎಂದರು.

ಇತ್ತೀಚಿಗೆ ನಿಧನರಾದ ಜನದನಿ ಕಲಾವಿದರಾದ ಸಿ.ಎಸ್.ರಾಮಕೃಷ್ಣ, ಚಂದ್ರಶೇಖರ್, ರವಿಪ್ರಸಾದ್ ಮತ್ತು ಕಾಂತರಾಜು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅವರ ಹೆಸರಿನಲ್ಲಿ ಕುಟುಂಬದವರನ್ನು ಗೌರವಿಸಲಾಯಿತು. ಬೆಂಗಳೂರು ವೀಲ್ ಕಾರ್ಟ್ ಸಂಸ್ಥೆಯ ಹೇಮಂತ್ ಅವರು ಪ್ರಾಧ್ಯಾಪಕಿ ಕೆಂಪಮ್ಮ ರಚಿತ ಕಿರು ಸಂಚಿಕೆಯನ್ನು ಬಿಡುಗಡೆ ಮಾಡಿದರು. ವೇದಿಕೆ ಸಮಾರಂಭದ ನಂತರ ಎಂ.ಆರ್.ಶ್ರೀನಿವಾಸಮೂರ್ತಿ ಅವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿ ಆಧಾರಿತ ಸಾಹೇಬರ ಸರ್ಕೀಟು ನಾಟಕವನ್ನು ಕರ್ನಾಟಕ ಸಂಘದ ಕಲಾವಿದರು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net