ಮೈಸೂರಿನ ಶ್ರೀ ಅವಧೂತದತ್ತ ಪೀಠದಲ್ಲಿ ಸಹಸ್ರ ಚಂಡಿಯಾಗ

sahasra-chandiyaga-at-sri-avadhutadatta-peetha-mysore
Published on

ಮೈಸೂರು: ಭಾರತ ಜಗತ್ತಿನಲ್ಲಿ ನಂಬರ್ ಒನ್ ದೇಶ ಆಗಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಶಿಸಿದರು.

ನಗರದ ಶ್ರೀ ಅವಧೂತದತ್ತ ಪೀಠದಲ್ಲಿ ಇಂದಿನಿಂದ ಪ್ರಾರಂಭವಾಗಿರುವ ವಿಶ್ವದ ಮೊಟ್ಟಮೊದಲ ಸಹಸ್ರ ಚಂಡಿಯಾಗ ಮತ್ತು ವನದುರ್ಗ ವೃಕ್ಷ ಶಾಂತಿ ಮಹಾಯಜ್ಞ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಅನೇಕ ವಿಷಯದಲ್ಲಿ ಭಾರತ ಜಗತ್ತಿನಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದೆ. ಆರ್ಥಿಕ ವಿಷಯದಲ್ಲೂ 4ನೆ ಸ್ಥಾನಕ್ಕೆ ಬಂದಿದ್ದೇವೆ. ನಮ್ಮ ದೇಶ ನಂಬರ್ ಒನ್ ಸ್ಥಾನಕ್ಕೆ ಬರಬೇಕು.ಅದಕ್ಕಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಹಸ್ರ ಚಂಡಿಯಾಗ ಮತ್ತು ವನದುರ್ಗ ವೃಕ್ಷ ಶಾಂತಿ ಮಹಾ ಯಜ್ಞ ಮೂಲಕ ನಮ್ಮೆಲ್ಲರ ಮನಸ್ಸಿಗೆ ನಾಟುವಂತೆ, ಭಕ್ತಿಯ ಭಾವ ವೃದ್ಧಿಯಾಗುವಂತೆ, ಆಧ್ಯಾತ್ಮಿಕ ಮನಸ್ಸು ಉದ್ದೀಪನ ಆಗುವಂತೆ ಮಾಡಿದ್ದಾರೆ. ವನದುರ್ಗ ವೃಕ್ಷ ಶಾಂತಿ ಮಹಾಯಜ್ಞದಲ್ಲಿ 10 ಸಾವಿರ ವೃಕ್ಷಗಳಿಗೆ ಪೂಜೆ ಸಲ್ಲಿಸುತ್ತಿರುವುದು ಸಂತಸದ ವಿಚಾರ ಎಂದರು.

ಇಡೀ ಜಗತ್ತಿನಲ್ಲಿ ಕಾಡು ಮತ್ತು ಗಿಡ, ಮರಗಳು ಕಡಿಮೆಯಾಗುತ್ತಿದೆ. ಆದರೆ ನಮ್ಮ ಭಾರತ ದೇಶದಲ್ಲಿ ಕಳೆದ 11 ವರ್ಷಗಳಲ್ಲಿ ಶೇ 17ರಷ್ಟು ಕಾಡು ವೃದ್ಧಿಯಾಗಿದೆ, ಇದಕ್ಕೆ ನಿಜವಾದ ಮೂಲಭೂತ ಕಾರಣ ಎಂದರೆ ಆಧ್ಯಾತ್ಮ ಭಕ್ತಿ, ದೇವರ ಮೇಲೆ ನಮ್ಮ ನಂಬಿಕೆ, ಸ್ವಾಮೀಜಿಯವರು ಮಾಡುತ್ತಿರುವ ಇಂತಹ ಚಂಡಿಯಾಗ. ಈ ಮೂಲಕ ಸೃಷ್ಟಿಯನ್ನು ಸಂರಕ್ಷಿಸಬೇಕು ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸಂದೇಶ ಕೊಟ್ಟಿದ್ದಾರೆ. ಇಂತಹ ಪುಣ್ಯ ಮತ್ತು ಪವಿತ್ರ ಕಾರ್ಯದಲ್ಲಿ ನನಗೆ ಅನಿರೀಕ್ಷಿತವಾಗಿ ಭಾಗವಹಿಸುವ ಲಾಭ ಸಿಕ್ಕಿದೆ. ಅದಕ್ಕಾಗಿ ಗಣಪತಿ ಸ್ವಾಮೀಜಿಯವರು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರಿಗೆ ನಾನು ಭಕ್ತಿ ಪೂರ್ವಕವಾಗಿ ನಮಿಸುತ್ತೇನೆ ಎಂದರು.

ಬೆಳಗ್ಗೆ 7ಗಂಟೆಗೆ ಅವಧೂತ ದತ್ತಪೀಠದ ಆವರಣದಲ್ಲಿ 11 ಹೋಮ ಕುಂಡಗಳಲ್ಲಿ ಸಹಸ್ರ ಚಂಡಿ ಯಾಗ ಪ್ರಾರಂಭವಾಯಿತು. ಇದರ ಜತೆಗೆ ರುದ್ರ ಹೋಮ ಕೂಡ ನೆರವೇರಿತು. ನಂತರ ಭಕ್ತಾದಿಗಳಿಂದ ಸೌಂದರ್ಯ ಲಹರಿ ಮತ್ತು ಲಲಿತಾ ಸಹಸ್ರನಾಮ ಕೂಡ ನಡೆಯಿತು. ಇಂದಿನ ಚಡಿಯಾಗ ಪೂಜಾ ಕಾರ್ಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಸಿಇಒ ವಿಶ್ವಭೂಷಣ್ ಮಿಶ್ರ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಮುಖಂಡ ಜೋಗಿ ಮಂಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net