

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸ ನಿಮಿತ್ತ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕೈಗೊಂಡಿದ್ದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾದ ಮಂಗಲದ ಅಂಗವಾಗಿ ಭಾನುವಾರ ಭಕ್ತರಿಂದ ಇಷ್ಟಲಿಂಗಕ್ಕೆ ಭಕ್ತಿಯ ಸಹಸ್ರ ಬಿಲ್ವಾರ್ಚನೆ ನಡೆಯಿತು.
ಬೆಳಗ್ಗೆ ಆರಂಭವಾದ ಏಕಾದಶ ರುದ್ರಾಭಿಷೇಕ ಮಹಾಪೂಜೆ ನಂತರ ಜರುಗಿದ ಸಹಸ್ರ ಬಿಲ್ವಾರ್ಚನೆ ಕಾರ್ಯದಲ್ಲಿ ಅಮ್ಮಿನಬಾವಿ, ಮರೇವಾಡ, ತಿಮ್ಮಾಪುರ, ಕರಡಿಗುಡ್ಡ, ಹಾರೋಬೆಳವಡಿ, ಕೌಲಗೇರಿ, ಚಂದನಮಟ್ಟಿ ಸೇರಿದಂತೆ ಹು-ಧಾ ಮಹಾನಗರದ ಭಕ್ತಗಣ ಬಿಲ್ವಪತ್ರಿಯ ದಳಗಳನ್ನು ಶಿವಸಹಸ್ರ ನಾಮಾವಳಿ ಪಠಣದೊಂದಿಗೆ ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆದರು.
ಶ್ರಾವಣದ ಒಂದು ತಿಂಗಳಕಾಲ ನಿತ್ಯ ಬೆಳಗ್ಗೆ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನಡೆಸಿದ ಇಷ್ಟಲಿಂಗ ಮಹಾಪೂಜೆ ಸಮಯದಲ್ಲಿ ಭಕ್ತ ಸಂಕುಲಕ್ಕೆ ಇಷ್ಟಲಿಂಗಾರ್ಚನೆ ಮಹತ್ವ ತಿಳಿಸಿ, ವೀರಶೈವ-ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವು ಅರುಹಿನ ಕುರುಹು. ಇಷ್ಟಲಿಂಗವು ಮನಸ್ಸಿನ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಶ್ರೀ ಗುರುವಿನ ಅನುಗ್ರಹದ ಮೂಲಕ ಪ್ರಾಪ್ತವಾಗುವ ಇಷ್ಟಲಿಂಗವನ್ನು ಸದಾ ದೇಹದ ಮೇಲೆಯೇ ಧಾರಣೆ ಮಾಡಬೇಕು. ಇಷ್ಟಲಿಂಗದ ಮೂಲಕವೇ ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನ ಸಾಧ್ಯವಾಗುತ್ತದೆ ಎಂಬ ತಿಳಿವಳಿಕೆ ನೀಡಿದರು. ಜತೆಗೆ ಒಟ್ಟು 57 ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು.