

ಮಂಗಳೂರು : ಅಖಿಲ ಭಾರತ ಸಹಕಾರ ಸಪ್ತಾಹ (71ನೇ) ಈ ಬಾರಿ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ ಎಂಬ ಧ್ಯೇಯದೊಂದಿಗೆ ನ.14ರಿಂದ 29ರವರೆಗೆ ರಾಷ್ಟ್ರದಾದ್ಯಂತ ನಡೆಯಲಿದೆ. ಸಹಕಾರ ಸಪ್ತಾಹದ ಮೂರನೇ ದಿನ ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಚಾರವಾಗಿ ರಾಜ್ಯಮಟ್ಟದ ಕಾರ್ಯಕ್ರಮ ನ.16ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ನಡೆದ ಸಹಕಾರ ಸಪ್ತಾಹದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಈ ಬಾರಿ ತುಂಬಾ ಅರ್ಥಪೂರ್ಣವಾಗಿ ಹಾಗೂ ಅಭೂತಪೂರ್ವವಾಗಿ ನಡೆಸಿ, ಸಹಕಾರ ಕ್ಷೇತ್ರದ ಸಾಧನೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಅಗತ್ಯವಾಗಿದೆ. ಸಹಕಾರ ಸಪ್ತಾಹ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ. ಪಿ ಅವರು ಮಾತನಾಡಿ ದ.ಕ.ಹಾಗೂ ಉಡುಪಿ ಜಿಲ್ಲೆಯ ವತಿಯಿಂದ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಪ್ರತೀ ವರ್ಷ ಆಯೋಜನೆ ಮಾಡುತ್ತಿದ್ದು, ಈ ಕಾರ್ಯಕ್ರಮವು ಇಡೀ ರಾಜ್ಯದಲ್ಲೇ ಮಾದರಿ ಕಾರ್ಯಕ್ರಮವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಪೂರ್ವಭಾವಿ ಸಭೆಯಲ್ಲಿ ಸಹಕಾರಿಗಳು ಹಾಗೂ ಉಭಯ ಜಿಲ್ಲೆಗಳ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಸಹಕಾರಿ ಯೂನಿಯನ್‌ನ ದ.ಕ.ಜಿಲ್ಲಾಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್, ಭಾಸ್ಕ.ಎಸ್. ಕೋಟ್ಯಾನ್, ಎಸ್.ರಾಜು ಪೂಜಾರಿ, ದೇವಿಪ್ರಸಾದ ಶೆಟ್ಟಿ, ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಜೈರಾಜ್ ಬಿ.ರೈ, ಕುಶಾಲಪ್ಪ ಗೌಡ ಪಿ, ಎಸ್.ಎನ್.ಮನ್ಮಥ, ರಾಜೇಶ್ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಉಪಸ್ಥಿತರಿದ್ದರು.
ದ.ಕ. ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯಕೆ. ಆರ್. ಸ್ವಾಗತಿಸಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ವಂದಿಸಿದರು.