

ಮಂಗಳೂರು : ದ.ಕ.ಹಾಗೂ ಉಡುಪಿ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶಕ್ತಿ ಆಗಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. 2022-23ನೇ ಸಾಲಿನಲ್ಲಿ 75.20 ಲಕ್ಷ ರೂ.ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.
ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಸಂಘದ ಪ್ರದಾನ ಕಛೇರಿಯಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು 1116 ಮಂದಿ ಸದಸ್ಯರನ್ನು ಹೊಂದಿದೆ . ಕಳೆದ ವರ್ಷಾಂತ್ಯಕ್ಕೆ ಠೇವಣಿ 74.19 ಕೋಟಿ ರೂ.ಯಿಂದ ವರದಿ ವರ್ಷದಲ್ಲಿ 84.53 ಕೋಟಿ ರೂ.ಗೆ ಏರಿಕೆಯಾಗಿದೆ . ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು 58.09 ಕೋಟಿ ರೂ.ಯಿಂದ 69.15 ಕೋಟಿ ರೂ.ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರ 132.28 ಕೋಟಿ ರೂ.ಯಿಂದ 153.68 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
*ಡಾ.ಎಂಎನ್‌ಆರ್ ಮಾರ್ಗದರ್ಶನ
ಸಂಘವು ನಾಲ್ಕು ಶಾಖೆಗಳನ್ನು ಹೊಂದಿದ್ದು ಮಂಗಳೂರುನಲ್ಲಿ ಎರಡು , ಉಡುಪಿ ಹಾಗೂ ಪುತ್ತೂರುನಲ್ಲಿ ತಲಾ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದೆ .ಮುಂದೆ ತಾಲೂಕುವಾರು ಶಾಖೆಗಳನ್ನು ತೆರೆಯಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಸಂಘದ ಪ್ರಗತಿಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಕಳೆದ 6 ವರ್ಷಗಳಿಂದ ಸಾಧನಾ ಪ್ರಶಸ್ತಿಯನ್ನು ನೀಡುತ್ತಿದೆ. ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸಹಕಾರ ರಂಗದ ಅಗ್ರಗಣ್ಯ ನಾಯಕರಾದ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕಾರಣವಾಗಿದೆ. ಅವರಿಗೆ ಸರ್ವ ಸದಸ್ಯರ ಮಹಾಸಭೆಯಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಜಗದೀಶ್ಚಂದ್ರ ಅಂಚನ್ ತಿಳಿಸಿದರು.
*ಪ್ರತಿಭಾ ಪುರಸ್ಕಾರ
ಸಂಘದ ಸದಸ್ಯರಾದ ಭಗವತಿ ಸಹಕಾರ ಬ್ಯಾಂಕ್ ಉದ್ಯೋಗಿ ಯಶವಂತಿ ಮತ್ತು ಪುತ್ತೂರು ಗ್ಲೋರಿಯಾ ಕ್ರೆಡಿಟ್ ಸಹಕಾರ ಸಂಘದ ಉದ್ಯೋಗಿ ಓಲಿಯಾ ಪ್ರಶಾಂತಿ ರೆಬೆಲ್ಲೊ ಇವರು ಎಚ್‌ಡಿಸಿಎಂ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದಿದ್ದು, ಇವರನ್ನು ಮಹಾಸಭೆಯಲ್ಲಿ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಸಂಘದ ಸದಸ್ಯರ 38 ಪ್ರತಿಭಾನ್ವಿತ ಮಕ್ಕಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನ ನೀಡಲಾಯಿತು.
*ಸನ್ಮಾನ
ಸಂಘದ ಮಾಜಿ ಗೌರವ ಕಾರ್ಯದರ್ಶಿ , ಎಸ್‌ಸಿಡಿಸಿಸಿ ಬ್ಯಾಂಕ್ ಮಹಾಪ್ರಬಂಧಕ ಅಶೋಕ್‌ಕುಮಾರ್ ಹಾಗೂ ಮಾಜಿ ನಿರ್ದೇಶಕ , ಮಂಗಳೂರು ಗೃಹ ನಿರ್ಮಾಣ ಸಹಕಾರ ಸಂಘದ ಉದ್ಯೋಗಿ ಚಂದ್ರಕಾಂತ್ ಸೇವಾ ನಿವೃತ್ತಿ ಹೊಂದಿದ್ದು ಇವರನ್ನು ಸನ್ಮಾನಿಸಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಸಂಘದ ಉಪಾಧ್ಯಕ್ಷ ದಿವಾಕರ ಶೆಟ್ಟಿ , ನಿರ್ದೇಶಕರಾದ ಪುಷ್ಪರಾಜ್.ಎಂ.ಎಸ್. ರಾಘವ ಆರ್‌ಉಚ್ಚಿಲ್, ವಿಶ್ವೇಶ್ವರ ಐತಾಳ್ , ಜಯಪ್ರಕಾಶ್ ರೈ ಸಿ, ವಿಶ್ವನಾಥ ಕೆ .ಟಿ. ಶಿವಾನಂದ ಪಿ, ಗಿರಿಧರ್ , ಅರುಣ್ ಕುಮಾರ್, ವಿಶ್ವನಾಥ ಅಮೀನ್, ಮೋಹನ್.ಎನ್., ಚಂದ್ರಕಲಾ , ಗೀತಾಕ್ಷಿ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ , ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.