ಸಹಕಾರಿ ವಂಚಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ ; ಸಹಕಾರಿ ಸಚಿವ ರಾಜಣ್ಣ ಸೂಚನೆ

IMG-20230731-WA0044.jpg
Published on

ಬೆಳಗಾವಿ : ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಅರ್ಬನ್ ಸೊಸೈಟಿಗಳಲ್ಲಿ ಹಣ ಕಬಳಿಸಿ, ದುರುಪಯೋಗಪಡಿಸಿಕೊಂಡು ಸಂಸ್ಥೆಗಳಿಗೆ ವಂಚನೆ ಎಸಗುವವರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್ ರಾಜಣ್ಣ ಅವರು ಸೂಚನೆ ನೀಡಿದರು.

ಸುವರ್ಣ ವಿಧಾನ ಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಸೋಮವಾರ ಕರೆಯಲಾಗಿದ್ದ ಬೆಳಗಾವಿ ಪ್ರಾಂತ್ಯದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಗಳ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಆದರೆ, ಪ್ರತಿ ಸಭೆಯಲ್ಲಿ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ, ಈ ಹಿಂದಿನ ಮಾಹಿತಿಯನ್ನು ಪರಿಶೀಲಿಸಿದಾಗ ಸಾಕಷ್ಟು ಮಾಹಿತಿಗಳು ಹೊಂದಾಣಿಕೆ ತಪ್ಪುತ್ತಿವೆ. ಅಧಿಕಾರಿಗಳು ಸಮರ್ಪಕ ಮಾಹಿತಿ ಸಮೇತ ಸಭೆಗಳಿಗೆ ಹಾಜರಾಗಬೇಕು ಎಂದರು.

ಕಳೆದ 3-4 ವರ್ಷಗಳಿಂದ ಬಾಕಿಯಿರುವ ವಂಚನೆ ಹಾಗೂ  ಕ್ರಿಮಿನಲ್ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ನ್ಯಾಯಾಲಯ ಹಂತಗಳಲ್ಲಿರುವ ಪ್ರಕರಣಗಳ ಕೋರ್ಟ್ ನಿಗದಿ ದಿನಾಂಕಕ್ಕೆ ಅಧಿಕಾರಿಗಳು ತಪ್ಪದೆ ಹಾಜರಾಗಿ ನಿಯಮಾನುಸಾರ ಕ್ರಮ ಜರುಗಿಸಬೇಕು ಎಂದು ಹೇಳಿದರು.  

ಸಾಲ ವಿತರಣೆ ಹಾಗೂ ವಸೂಲಾತಿಯತ್ತ  ಅಧಿಕಾರಿಗಳು  ಗಮನ ಹರಿಸಬೇಕು. ಸಾರ್ವಜನಿಕರು ಸಾಕಷ್ಟು ಠೇವಣಿಗಳನ್ನು ಇರಿಸಿದ್ದಾರೆ. ಸಾರ್ವಜನಿಕರ ನಂಬಿಕೆಗೆ ಚ್ಯುತಿ ಬರದಂತೆ ಸಿಬ್ಬಂದಿ ಕೆಲಸ ಮಾಡಬೇಕು. ಎಸ್.ಸಿ.ಎಸ್. ಟಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ  ವರ್ಗದ ಸಣ್ಣ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಹೆಚ್ಚಿನ ಕೃಷಿ ಸಾಲ ನೀಡಬೇಕು. ಹೆಚ್ಚು ಜಾಮೀನು ಹೊಂದಿದ ರೈತರಿಗೆ ಸಾಲ ನೀಡುವುದು ಮಾತ್ರವಲ್ಲದೇ ಸಣ್ಣ ಜಮೀನು ಹೊಂದಿದ ರೈತರಿಗೂ ಕೂಡ ಕೃಷಿ ಒದಗಿಸುವತ್ತ ಅಧಿಕಾರಿ ಸಿಬ್ಬಂದಿಗಳು ಆದ್ಯತೆ ನೀಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಲಹೆ ನೀಡಿದರು.

ಸಭೆಯಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕ ಕೆ.ಎಂ.ಆಶಾ,  ಸಹಕಾರ ಸಂಘಗಳ ಅಪರ ನಿಬಂಧಕ ಪ್ರಕಾಶ ರಾವ್, ಬೆಳಗಾವಿ ಜಂಟಿ ನಿಬಂಧಕ ಸುರೇಶ ಗೌಡ, ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರು ಹಾಗೂ ಸಹಕಾರ ಇಲಾಖೆಯ ವಿವಿಧ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net