ನೀರು ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ: ಅಪೆಕ್ಸೃ್ ಬ್ಯಾಂಕ್ ನಿರ್ದೇಶಕ ಅಮರಾವತಿ ಸಿ.ಅಶ್ವಥ್ ಸಲಹೆ

22_11_Mdy_01(Sahakara Sapthaha)
Published on

ಮಂಡ್ಯ: ನೀರಿನ ಮಿತ ಬಳಕೆ ಹಾಗೂ ಸದ್ಭಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ನೀರನ್ನು ಅಪವ್ಯಯ ಆಗದಂತೆ ಬಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಪೆಕ್ಸೃ್ ಬ್ಯಾಂಕ್ ನಿರ್ದೇಶಕ ಅಮರಾವತಿ ಸಿ.ಅಶ್ವಥ್ ಹೇಳಿದರು.
ತಾಲೂಕಿನ ಮಂಗಲ ಗ್ರಾಮದ ಡೇರಿ ಆವರಣದಲ್ಲಿ ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ 69ನೇ ರಾಷ್ಟ್ರೀಯ ಸಹಕಾರ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅಪೆಕ್ಸೃ್ ಬ್ಯಾಂಕ್ ಆರ್ಥಿಕ ನೆರವಿನ ಸಂಚಾರ ಕುಡಿಯುವ ನೀರಿನ ಟ್ಯಾಂಕರ್‌ನ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಜನ, ಜಾನುವಾರುಗಳಿಗೆ ಹಾಗೂ ರೈತಾಪಿ ವರ್ಗಕ್ಕೆ ತುಂಬಾ ಅನುಕೂಲವಾಗುವ ನಿಟ್ಟಿನಲ್ಲಿ ನೀರು ಪೂರೈಸುವ ಸಂಚಾರಿ ವಾಹನವನ್ನು 1,75,000 ರೂಗಳ ಅನುದಾನವನ್ನು ಈ ವಾಹನದ ಖರೀದಿಗೆ ನೀಡಲಾಗಿರುತ್ತದೆ ಎಂದರು.
ಸಂಚಾರ ವಾಹನವನ್ನು ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿ ಜನ, ಜಾನುವಾರು, ಜೀವ ಸಂಕುಲಗಳಿಗೆ ಅನುಕೂಲವಾಗುತ್ತದೆ. ಇತರೆ ಗ್ರಾಪಂಗಳು ಅಪೆಕ್ಸೃ್ ಬ್ಯಾಂಕಿನ ನೆರವನ್ನು ಸಂಚಾರ ಕುಡಿಯುವ ನೀರಿನ ಟ್ಯಾಂಕರ್ ವಾಹನ ಬಳಕೆಗೆ ಅಳವಡಿಸಿಕೊಳ್ಳಿ. ನೀರಾವರಿ ಕಾಯ್ದೆ ಹಾಗೂ ಸಹಕಾರ ಕಾಯ್ದೆ ಅಡಿ ಮತ್ತು ಸಹಭಾಗಿತ್ವದಲ್ಲಿ ನೀರಾವರಿ ಆಡಳಿತ ಕಾರ್ಯವನ್ನು ಮಂಗಲ ನೀರು ಬಳಕೆದಾರರ ಸಹಕಾರ ಸಂಘ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ನೀರು ಬಳಕೆದಾರರ ಸಹಕಾರ ಸಂಘದ ಏಳಿಗೆಗೆ ನನ್ನ ಕೈಲಾದಷ್ಟು ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತೇನೆ ಎಂದು ಹೇಳಿದರು.
ಕಾವೇರಿ ನೀರಾವರಿ ನಿಗಮ ಅಧೀಕ್ಷಕ ಇಂಜಿನಿಯರ್ ಎಚ್.ಎಸ್.ಆನಂದ್ ಮಾತನಾಡಿ, ನೀರಿನ ಸದ್ಭಳಕೆ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ನೀರನ್ನು ಮಿತವಾಗಿ ಬಳಸುವ ಮೂಲಕ ಸದ್ಭಳಕೆ ಮಾಡಿಕೊಳ್ಳಿ. ಸಂಚಾರ ಕುಡಿಯುವ ನೀರಿನ ಟ್ಯಾಂಕರ್ ರೈತರ ವ್ಯವಸಾಯದ ಹೆಚ್ಚಿನ ಕೆಲಸಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ಸಂಸ್ಥಾಪಕ ಮಂಗಲ ಎಂ.ಯೋಗೀಶ್ ಮಾತನಾಡಿ, ದೇಶದಲ್ಲಿ ಸಹಕಾರ ತತ್ವದಲ್ಲಿ ನೀರಾವರಿ ಬಳಕೆದಾರ ಸಹಕಾರ ಸಂಘಗಳು ಅತಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತೇವೆ ಎಂದರೆ ಅದು ಕರ್ನಾಟಕದಲ್ಲಿ ಮಾತ್ರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ನೀರಾವರಿ ಆಡಳಿತ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ ಎಂದರು.
ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಇ.ಮಹೇಶ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಎಂ.ಬಿ.ಸುರೇಶ್, ಮಾಜಿ ಪ್ರಧಾನರಾದ ಕೆ. ಶಂಕರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಜೆ.ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿ.ರವಿಕುಮಾರ್, ಪಿಎಸಿಎಸ್ ಅಧ್ಯಕ್ಷ ಎಂ.ಇ.ಶಂಕರ, ಎಂಪಿಸಿಎಸ್ ಅಧ್ಯಕ್ಷ ವರದರಾಜು, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ನಾಗೇಂದ್ರ, ದಿವಾಕರ್, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net