ಸಿಬಂದಿ ಕೊರತೆಯಿಂದ ಯೋಜನೆ ಅನುಷ್ಠಾನ ವಿಳಂಬ: ಯಶ್ಪಾಲ್​ ಸುವರ್ಣ

udp-8-sahakara
Published on

ಉಡುಪಿ: ಸಹಕಾರ ಕ್ಷೇತ್ರ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಹಲವು ಯೋಜನೆಗಳಿವೆ. ಆದರೆ ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ ಇಲಾಖೆಗಳಿಗೆ ಪೂರ್ಣ ಪ್ರಮಾಣದ ಸಿಬಂದಿ ನೇಮಕವಾಗಬೇಕು ಎಂದು ಶಾಸಕ ಯಶಪಾಲ್​ ಸುವರ್ಣ ಹೇಳಿದರು.

ಮಂಗಳವಾರ ಬಡಗಬೆಟ್ಟು ಕ್ರೆಡಿಟ್​ ಕೋ ಆಪರೇಟಿವ್​ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್​ ಉಡುಪಿ ಹಾಗೂ ಜಿಲ್ಲಾ ಸಹಕಾರ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಲಾಗಿದ್ದ 'ಆಡಳಿತ ನಿರ್ವಹಣಾ ತರಬೇತಿ ಶಿಬಿರ' ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಭಾಗದ ಆರ್ಥಿಕತೆಗೆ ಮೀನುಗಾರರ ಕೊಡುಗೆಯೂ ಅಪಾರ. ಯುವ ಪೀಳಿಗೆ ಅದರಲ್ಲಿ ತೊಡಗಿಕೊಳ್ಳುವಂತಾಗಲು ಅವರಿಗೆ ಆರ್ಥಿಕ ಬೆಂಬಲ ನೀಡುವ ಕೆಲಸವಾಗಬೇಕು. ಸಹಕಾರ ಇಲಾಖೆಯ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಜಿಲ್ಲಾ ಸಹಕಾರ ಯೂನಿಯನ್​ ಪಾತ್ರ ಮಹತ್ತರದ್ದಾಗಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್​ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ಟಿ. ಅಂಜನಾದೇವಿ ಹಾಗೂ ದ.ಕ. ಸಹಕಾರ ಸಂಘಗಳ ಉಪನಿಬಂಧಕ ಕಚೇರಿಯ ಅಧೀಕ್ಷಕ ಎನ್​.ಜೆ. ಗೋಪಾಲ್​ ವಿಶೇಷ ಉಪನ್ಯಾಸ ನೀಡಿದರು.
ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್​ ಕುಮಾರ್​ ಎಸ್​.ವಿ., ಯೂನಿಯನ್​ ಉಪಾಧ್ಯಕ್ಷ ಅಶೋಕ್​ ಕುಮಾರ್​ ಬಲ್ಲಾಳ್​, ಆಡಳಿತ ಮಂಡಳಿ ಸದಸ್ಯರಾದ ಕೆ. ಕೊರಗ ಪೂಜಾರಿ, ಕೆ. ಸುರೇಶ್​ ರಾವ್​ ಮತ್ತು ಮನೋಜ್​ ಎಸ್​. ಕರ್ಕೇರ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕೆ. ಸುರೇಶ್​ ರಾವ್​ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net