

ಕೋಲಾರ: ಜನರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಸಹಕಾರ ಬ್ಯಾಂಕುಗಳ ಮೂಲಕ ಸಾಲಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತಿಸಿದ್ದು ಶೀಘ್ರವೇ ಆದೇಶ ಹೊರ ಬೀಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಟಿ.ಚನ್ನಯ್ಯರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಜಿಪಂ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಿ ಮಾತನಾಡಿ, ರಾಜ್ಯದ ಸಹಕಾರ ಬ್ಯಾಂಕುಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ಕಲ್ಪಿಸಲು ಕಾಳಜಿ ವಹಿಸಬೇಕು ಎಂದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಬೇಕೆಂಬ ಮುಖ್ಯಮಂತ್ರಿಗಳ ಆಶಯವನ್ನು ಕಾರ್ಯರೂಪಕ್ಕೆ ತರಲು ಲಾಭದಲ್ಲಿರುವ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟಗಳಿಂದ ನೆರವು ಪಡೆಯಲಾಗಿದೆ. ಪ್ರೋತ್ಸಾಹಧನದ ಚೆಕ್ ತಲುಪಿಸಲು ಜಿಲ್ಲಾಧಿಕಾರಿಗಳು ಸಹಕಾರ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಸರ್ಕಾರದ ಉದ್ದೇಶ ಸಫಲಗೊಳಿಸಬೇಕು ಎಂದರು.
ಸಹಕಾರ ಕ್ಷೇತ್ರದಲ್ಲಿ ಅಸಹಕಾರ ಎಂಬುದು ಇರಕೂಡದು, ಸಾಲ ವಿತರಣೆಯಲ್ಲಿ ತಾರತಮ್ಯವಾದರೆ ಸರ್ಕಾರ ಸಹಿಸಲ್ಲ. ಡಿಸಿಸಿ ಬ್ಯಾಂಕಿನ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆಲ ನಿರ್ದೇಶಕರು ಹಾಗೂ ರೈತರು ಸಾಲ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಮೂಕರ್ಜಿಗಳಿಗೆ ಮಾನ್ಯತೆ ನೀಡುವವನಲ್ಲ, ತನಿಖೆ ಮಾಡಿಸಿ ತಪ್ಪು ಸಾಬೀತಾದರೆ ಕಾನೂನು ಕ್ರಮ ಜರುಗಿಸುವೆ ಎಂದರು.
ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಮಾಡುವೆ, ಪರಿಶಿಷ್ಟ ಜಾತಿ, ಪಂಗಡ, ಒಬಿಸಿಗಳಿಗೆ ಸಹಕಾರ ಸಂಘದಲ್ಲಿ ಸದಸ್ಯತ್ವ ಹಾಗೂ ಹಕ್ಕು ಇರಬೇಕೆಂಬ ನಿಯಮ ಪಾಲಿಸದಿದ್ದರೆ ಸಹಕಾರ ತತ್ವಕ್ಕೆ ಬೆಲೆ ಇರುವುದಿಲ್ಲ, ರಾಜ್ಯದ 21 ಡಿಸಿಸಿ ಬ್ಯಾಂಕುಗಳಿಗೆ ಚುನಾವಣೆ ನಡೆಯಬೇಕಿದ್ದು ಸದಸ್ಯತ್ವ ಹಾಗೂ ಲೆಕ್ಕ ಪರಿಶೋಧನೆ ಸರಿಯಾಗಿಲ್ಲದಿದ್ದ ಪಕ್ಷದಲ್ಲಿ ಕಠಿಣ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಕೆ ನೀಡಿದರು.
ನಾಗೇಶ್ ತಲೆ ಕೂದಲು ಕಪ್ಪಾಗಿಯೇ ಇದೆ: ಸಚಿವ ನಾಗೇಶ್ ಮತ್ತು ನನ್ನ ನಡುವೆ 30 ವರ್ಷಗಳ ಸ್ನೇಹವಿದೆ. ನನ್ನ ತಲೆ ಕೂದಲು ಬೆಳ್ಳಗಾಗಿದೆ, ಆದ್ರೆ ಅವನ ತಲೆ ಕೂದಲು ಕಪ್ಪಾಗಿಯೇ ಇದೆ, ಸಚಿವನಾದರೂ ಅವನಲ್ಲಿ ಯಾವುದೇ ವ್ಯತ್ಯಾಸ ಕಂಡ ಬಂದಿಲ್ಲ ಎಂದು ಸೋಮಶೇಖರ್ ಹಾಸ್ಯ ಚಟಾಕಿ ಹಾರಿಸಿದರು.
ಹೆಲಿಕಾಫ್ಟರ್ ತರಿಸಲು ಉದ್ದೇಶಿಸಿದ್ದೆ: ಆಶಾ ಕಾರ್ಯಕರ್ತೆಯರನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸನ್ಮಾನಿಸಬೇಕು, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿಸಬೇಕೆಂಬ ಆಸೆ ಇತ್ತು, ಆದರೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯವರು 2000 ಆಶಾ ಕಾರ್ಯಕರ್ತೆಯರನ್ನು ಒಂದು ಕಡೆ ಸೇರಿಸಿದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದರಿಂದ ಸಾಂಕೇತಿಕವಾಗಿ ಚೆಕ್ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಆಶಾ ಕಾರ್ಯಕರ್ತರ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ವ್ಯವಸ್ಥೆ ಆಗಬೇಕೆಂದು ಸಲಹೆ ನೀಡಿದರೆ, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮ, ಜನ ಹಾಗೂ ಜನಪ್ರತಿನಿಧಿಗಳ ಸಹಕಾರದ ಬಗ್ಗೆ ವಿವರಿಸಿದರು.
ಡಿಎಚ್‌ಒ ಡಾ.ವಿಜಯಕುಮಾರ್, ಸಹಕಾರ ಇಲಾಖೆ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕಿ ಶಾಂತಕುಮಾರಿ, ಡಿಸಿಸಿ ಬ್ಯಾಂಕ್ ಎಂಡಿ ರವಿ ಹಾಗೂ ಸಹಕಾರ ಇಲಾಖೆ ಜಿಲ್ಲಾ ಪ್ರಭಾರ ಉಪ ನಿಬಂಧಕ ನೀಲಪ್ಪನವರ್ ಸಿದ್ದನಗೌಡ, ಕೋಚಿಮುಲ್ ಎಂಡಿ ಡಾ.ತಿಪ್ಪೆಸ್ವಾಮಿ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರು ದೇವತೆಗಳು: ಜನರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಶಾ ಕಾರ್ಯಕರ್ತೆಯರು ನಮ್ಮ ಪಾಲಿನ ದೇವತೆಗಳು, ಜಗತ್ತಿನಲ್ಲಿ ಗಂಡು ಮತ್ತು ಹೆಣ್ಣು ದೇವರಿದ್ದಾರೆ, ಆದರೆ ಹೆಣ್ಣು ದೇವರಿಂದಲೇ ಕರೊನಾ ನಿಭಾಯಿಸಲು ಸಾಧ್ಯವಾಗುತ್ತಿದೆ, ಆಶಾ ಕಾರ್ಯಕರ್ತೆಯರನ್ನು ಪ್ರತಿಯೊಬ್ಬರೂ ದೇವತೆ ಎಂದು ಪೂಜಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕರೆ ನೀಡಿದಾಗ ಆಶಾ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಟ್ಟು 40250 ಆಶಾ ಕಾರ್ಯಕರ್ತೆಯರಿದ್ದಾರೆ. ಇವರಿಗೆ 12.75 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ, ಈಗಾಗಲೆ 10 ಜಿಲ್ಲೆಗಳಲ್ಲಿ ಚೆಕ್ ವಿತರಣಾ ಕಾರ್ಯ ಮುಗಿಸಿದ್ದು ಕೋಲಾರ 11ನೇ ಜಿಲ್ಲೆಯಾಗಿದೆ. ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ