

ಉಡುಪಿ: ಜಿಲ್ಲೆಯಲ್ಲಿ 338 ಹಾಲು ಉತ್ಪಾದಕರ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಡುಪಿಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಹಾಗೂ ಸಹಕಾರ ಭಾರತಿ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕ ಮಂಜುನಾಥ ಎಸ್.ಕೆ. ಆಗ್ರಹಿಸಿದ್ದಾರೆ.
ಗುರುವಾರ ಸಹಕಾರ ಭಾರತಿ ಹಾಲು ಉತ್ಪಾದಕರ ಪ್ರಕೋಷ್ಠ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೈನುಗಾರರ ಬೃಹತ್ ಜನಾಂದೋಲನದಲ್ಲಿ ಅವರು ಮಾತನಾಡಿದರು. ಹಾಲಿನ ದರ ಏರಿಸುವ ಬದಲು ಹೈನುಗಾರರಿಗೆ ಸಬ್ಸಿಡಿ ನೀಡುವುದು ಉತ್ತಮ ಮಾರ್ಗ. ಇದರಿಂದ ಹಾಲು ಉತ್ಪಾದನೆ ಜಾಸ್ತಿಯಾಗಲಿದೆ. ಗ್ರಾಮೀಣ ಪ್ರದೇಶದ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳಲಿದೆ. ಇದರಿಂದ ಸರ್ಕಾರಕ್ಕೆ ಲಾಭವೇ ಹೆಚ್ಚು. ಒಂದು ಬಾರಿ ಕೃಷಿಕರು ಹೈನುಗಾರಿಕೆಯಿಂದ ವಿಮುಖರಾದರೆ ಮತ್ತೆ ಅದೇ ವೃತ್ತಿಗೆ ಮರಳುವುದು ಕಷ್ಟ. ಹೀಗಾದರೆ ಹಾಲು ಉತ್ಪಾದನೆ ಕುಂಠಿತವಾಗಿ ಹಾಲು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ಇದು ಸರ್ಕಾರ ಬೊಕ್ಕಸಕ್ಕೆ ಬಹುದೊಡ್ಡ ಹೊರೆ. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀಟರಿಗೆ ಕನಿಷ್ಠ 5 ರೂ. ಪ್ರೋತ್ಸಾಹ ಧನ ಮತ್ತು ನಂದಿನಿ ಪಶು ಆಹಾರಕ್ಕೆ ಕೆಜಿಗೆ ಕನಿಷ್ಠ 5 ರೂ. ಸಬ್ಸಿಡಿ ಒದಗಿಸಲು ವಿಶೇಷ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಮೈಸೂರು ವಿಭಾಗ ಸಂಘಟನಾ ಪ್ರಮುಖ ಮೋಹನ್ ಕುಮಾರ್ ಕುಂಬಳೇಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಸುಜಿತ್ ಮತ್ತು ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕ ಕನ್ನಾರು ಕಮಲಾಕ್ಷ ಹೆಬ್ಬಾರ್, ಕೆಎಂಎಫ್ ನಿರ್ದೇಶಕಿ ಸ್ಮಿತಾ ಶೆಟ್ಟಿ, ಮಹಿಳಾ ಪ್ರಮುಖ್ ವಿಮಲಾ ಪೈ, ಉಡುಪಿ ತಾಲೂಕು ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಬ್ರಹ್ಮಾವರ ಅಧ್ಯಕ್ಷ ಅಶೋಕ್ ಶೆಟ್ಟಿ, ಕಾರ್ಕಳ ಅಧ್ಯಕ್ಷ ಹರೀಶ್ ಕಲ್ಯ, ಬೈಂದೂರು ಅಧ್ಯಕ್ಷ ಅಶೋಕ್ ಆಚಾರ್ಯ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.