

ಮಂಗಳೂರು: ಅಖಿಲ ಭಾರತ ಮಟ್ಟದಲ್ಲಿ ಮೀನುಗಾರಿಕಾ ಸಹಕಾರಿ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಪ್ರತಿನಿಧಿಗಳಿಗೆ ಸಹಕಾರ ಭಾರತಿ ವತಿಯಿಂದ ಎರಡು ದಿನದ ಅಭ್ಯಾಸವರ್ಗ ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಜು.30 ಮತ್ತು 31ರಂದು ಹಮ್ಮಿಕೊಳ್ಳಲಾಗಿದೆ.
ಜು.30ರಂದು ಮಧ್ಯಾಹ್ನ 3ಗಂಟೆಗೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಉದ್ಘಾಟಿಸುವರು. ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ದೀನನಾಥ್ ಠಾಕೂರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ್ ಪಾಚ್ಪುರ್, ಮತ್ಸ್ಯ ಪ್ರಕೋಷ್ಠದ ರಾಷ್ಟ್ರೀಯ ನಾಯಕರು ಭಾಗವಹಿಸುವರು. ಅಭ್ಯಾಸವರ್ಗದಲ್ಲಿ ಮೀನುಗಾರಿಕಾ ಸಹಕಾರಿ ಸಂಸ್ಥೆಗಳ ಕಾಯ್ದೆಗಳು, ಬೇರೆ ಬೇರೆ ಹಂತದ ಒಕ್ಕೂಟ ರಚನೆ, ಮೌಲ್ಯವರ್ಧಿತ ಮೀನು ಮತ್ತು ಮೀನಿನ ಉಪ ಉತ್ಪನ್ನಗಳ ಉತ್ಪಾದನೆ ಹಾಗೂ ಸಹಕಾರಿ ಸಂಸ್ಥೆಗಳ ಮೂಲಕ ಮೀನುಗಾರರ ಅಭಿವೃದ್ಧಿ, ಮೀನುಗಾರಿಕಾ ಸಹಕಾರಿ ಸಂಸ್ಥೆಗಳಿಂದ ವಿವಿಧ ಉದ್ಯೋಗಗಳ ಸೃಷ್ಟಿ ಮುಂತಾದ ವಿಷಯಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ ಎಂದು ಸಹಕಾರ ಭಾರತಿ ಮತ್ಸ್ಯ ಪ್ರಕೋಷ್ಠ ರಾಷ್ಟ್ರೀಯ ಸಹ ಸಂಚಾಲಕ್ ಜಯಂತಿಬಾಯಿ ಕೇವತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮತ್ಸ್ಯಕ್ರಾಂತಿ ಯೋಜನೆ ಮೂಲಕ ಮೀನುಗಾರರ ಸಾಮಾಜಿಕ, ಆರ್ಥಿಕ, ಉನ್ನತೀಕರಣಕ್ಕೆ ಶ್ರಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಭಾರತಿಯ ಮತ್ಸ್ಯ ಪ್ರಕೋಷ್ಠ ಮೂಲಕ ಸಹಕಾರ ಭಾರತಿ ಅಭ್ಯಾಸವರ್ಗವನ್ನು ಎಲ್ಲ ರೀತಿಯ ಮೀನುಗಾರರಿಗೆ ಹಾಗೂ ಮೀನುಗಾರಿಕಾ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಹಮ್ಮಿಕೊಳ್ಳಲಾಗಿದೆ. ಮೀನುಗಾರಿಕಾ ಕಾಲೇಜು ಮಂಗಳೂರು, ಎನ್‌ಸಿಡಿಸಿ ದೆಹಲಿ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಒಕ್ಕೂಟ ಮಂಗಳೂರು, ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು ಸಹಯೋಗದಲ್ಲಿ ಅಭ್ಯಾಸವರ್ಗ ನಡೆಯಲಿದೆ. 26 ರಾಜ್ಯಗಳಿಂದ 200ರಷ್ಟು ಪ್ರತಿನಿಗಳು ಭಾಗವಹಿಸಲಿದ್ದಾರೆ ಎಂದರು.
ಹಿರಿಯ ಸಹಕಾರಿ ಶಾಂತಾ ಆರ್., ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು, ನಗರ ಅಧ್ಯಕ್ಷ ಗಣೇಶ್ ಶೆಣೈ ಉಪಸ್ಥಿತರಿದ್ದರು.