

ಚಿತ್ರದುರ್ಗ : ಇಂದಿಗೂ ಕಗ್ಗತ್ತಲೆಯಲ್ಲಿಯೇ ಜೀವನ ನಡೆಸುತ್ತಿರುವ ಅನೇಕ ಸಮುದಾಯಗಳಿಗೆ ಜ್ಞಾನದ ಬೆಳಕನ್ನು ಹರಿಸುವ ಮೂಲಕ ಅವು ಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಸಹಜ ಶಿವಯೋಗ ಸೋಮವಾರ ಕಾರ‌್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ,ಕಗ್ಗತ್ತಲೆಯ ಲ್ಲಿರುವ ಸಮುದಾಯಗಳಿಗೆ ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು.
ಸಮುದಾದಯದ ಸ್ವಾಮೀಜಿಗಳು ಸಾಕ್ಷರ ಪ್ರಜ್ಞೆ ಮೂಡಿಸಬೇಕು.ಮೂಢನಂಬಿಕೆ,ಕಂದಾಚಾರ, ಹಳೆಯ ಸಂಪ್ರದಾಯಗಳಿಂದ ಹೊರ ತಂದು ಸಮುದಾಯಗಳ ಪ್ರಗತಿಗೆ ಪ್ರಯತ್ನಿಸಬೇಕು. ದೇಶದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪಶ್ಯತೆ ನಿವಾರಣೆಯಾದರೆ ಸಾಮಾಜಿಕ ಸಮಾನತೆ ಬರುತ್ತದೆ ಎಂದರು.
ಇರಕಲ್ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಮಾತನಾಡಿ,ಕರ್ನಾಟಕವು ಸಿದ್ಧಗಂಗೆಯ ಶಿವಕುಮಾರಶ್ರೀ,ಇಳಕಲ್ ಶ್ರೀ ಗಳನ್ನು ಕಳೆದುಕೊಂಡು ಬಡವಾಗಿದೆ ಎಂದು ಜನ ಭಾವಿಸಿದ್ದರು. ಆದರೆ ಅವರ ಶಕ್ತಿ, ಸಾಮರ್ಥ್ಯಗಳನ್ನೆಲ್ಲ ಮುರುಘಾ ಶರಣರಲ್ಲಿ ಸಮ್ಮಳಿತಗೊಂಡಿದ್ದು,ಇವರಿಂದಾಗಿ ಕರ್ನಾಟಕ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಎಂದೂ ಬಡವಾಗುವುದಿಲ್ಲ. ಶ್ರೀ ಮಠದಲ್ಲಿ ಜನತಾ ವಿಶ್ವವಿದ್ಯಾಲಯ ಸ್ಥಾಪಿಸಿ ಜನಸಾಮಾನ್ಯರನ್ನು ಸಾಧಕರನ್ನಾಗಿ ಮಾಡುವ ಪ್ರಯತ್ನವನ್ನು ಶರಣರು ಮಾಡುತ್ತಿದ್ದಾರೆ ಎಂದರು.
ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಚಿಗರಹಳ್ಳಿ ಶ್ರೀ ಮರುಳಶಂಕರದೇವ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮಿ,ಶಿಗ್ಗಾವಿ ವಿರಕ್ತಮಠದ ಶ್ರೀಸಂಗನಬಸವ ಸ್ವಾಮೀಜಿ, ಕಲಬುರ್ಗಿಯ ಗುತ್ತಿಗೆದಾರ ಬಸವರಾಜ ಸಜ್ಜನ, ವಿಶ್ವಕರ್ಮ ಸಮಾಜದ ಮುಖಂಡ ಎಂ. ಶಂಕರಮೂರ್ತಿ,ಮಡಿವಾಳ ಸಮಾಜದ ಮುಖಂಡ ಟಿ.ರಮೇಶ್ ಕಮ್ಮಾರ ಸಮಾಜದ ಮುಖಂಡ ಎನ್.ಹನುಮಂತಪ್ಪ ಹಾಗೂ ನಾನಾ ಮಠಾಧೀಶರು ಇದ್ದರು.