ಚಂದ್ರಯಾನದಲ್ಲಿ ಸಾಗರದ ವಿಕ್ರಮ್ ಕಿಣಿ ಕಮಾಲ್

27kgl01
ವಿಕ್ರಮ್ ಕಿಣಿ
Published on

ಕಾರ್ಗಲ್: ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದ ಯುವಕ ನಮ್ಮ ದೇಶದ ಹೆಮ್ಮೆಯ ಯಶಸ್ವಿ ಚಂದ್ರಯಾನ-3ರಲ್ಲಿ ಗುಣಮಟ್ಟದ ನಿಯಂತ್ರಕ ಸಹಾಯಕರಾಗಿ ಸೇವೆ ಸಲ್ಲಿಸಿದ್ದು ಸಾಗರದ ಕೀರ್ತಿ ಪಾತಾಕೆಯನ್ನು ಎಲ್ಲೆಡೆ ಹಾರಿಸಿದ್ದಾರೆ.

ತಾಲೂಕಿನ ಕರೂರು ಹೋಬಳಿಯ ಬ್ಯಾಕೋಡು ಗ್ರಾಮದ ದಿ. ಜ್ಯೋತಿ ಮತ್ತು ಶಾಂತಾರಾಮ ಕಿಣಿ ದಂಪತಿಯ 2ನೇ ಪುತ್ರ ವಿಕ್ರಮ್ ಕಿಣಿ ಈ ಸಾಧಕ.
ವಿಕ್ರಮ್ ತಮ್ಮ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಬ್ಯಾಕೋಡು ಸರ್ಕಾರಿ ಶಾಲೆಯಲ್ಲಿ ಪೂರೈಸಿ, ಹುಬ್ಬಳಿಯ ಎಸ್.ಕೆ.ಶರ್ಮಾ ಕೇಂದ್ರದಲ್ಲಿ ಐಟಿಐ ತರಬೇತಿ ಪಡೆದರು. ವಿದ್ಯುನ್ಮಾನ ಶಾಸ್ತ್ರದಲ್ಲಿ ಕೈಗಾರಿಕಾ ತರಬೇತಿ ಪಡೆದು 2010ರಲ್ಲಿ ಕೇರಳ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನೌಕರಿ ಪಡೆದರು. 2018ರಲ್ಲಿ ಬೆಂಗಳೂರು ಇಸ್ರೋದ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ವಿದ್ಯುನ್ಮಾನದ ವಿಶ್ವಾಸಾರ್ಹತೆ ಮತ್ತು ಗುಣಮಟ್ಟ ವಿಭಾಗದಲ್ಲಿ ತಂತ್ರಜ್ಞರಾಗಿ ಸೇವೆ ಆರಂಭಿಸಿದರು. ವೃತ್ತಿಯ ಜತೆಗೆ ಬೆಂಗಳೂರು ಜಯಚಾಮರಾಜೇಂದ್ರ ಸಂಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಶಿಕ್ಷಣ ಪೂರೈಸಿದ ವಿಕ್ರಮ್ ಕಿಣಿ, ಚಂದ್ರಯಾನ-2 ಮತ್ತು 3ರ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎರಡೂ ಯೋಜನೆಗಳ ಆರಂಭದಿಂದ ಶ್ರೀಹರಿಕೋಕಿದಲ್ಲಿ ಉಡಾವಣೆವರೆಗೂ ವಿಕ್ರಮ್ ಗುಣಮಟ್ಟ ನಿಯಂತ್ರಕ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಾಹ್ಯಾಕಾಶ ಸಂಸ್ಥೆಯಲ್ಲಿ ಮಾತ್ರವಲ್ಲದೇ ಇವರು ಕೃಷಿ ಮತ್ತು ಜೇನು ಸಾಕಣೆಯಲ್ಲೂ ಉತ್ತಮವಾದ ಅನುಭವವನ್ನು ಹೊಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲೇ ಕಲಿತ ವಿಕ್ರಮ್, ಇಸ್ರೋದಲ್ಲಿ ಸೇವೆ ಸಲ್ಲಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಮಾದರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net