

ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಕಳಪೆ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಬೇಕು. ಗುತ್ತಿಗೆದಾರರಿಂದಲೇ ದೇವಸ್ಥಾನ ಮರು ನಿರ್ಮಾಣ ಮಾಡಿಸಬೇಕೆಂದು ಒತ್ತಾಯಿಸಿ ಗುರುವಾರ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.
ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ ಮಾತನಾಡಿ, ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ನಡೆದು ಐದು ವರ್ಷ ಆಗಿದೆ. ಅಷ್ಟರೊಳಗೆ ಮೂಲಸ್ವರೂಪಕ್ಕಿಂತ ಹೆಚ್ಚಿನ ಸೋರಿಕೆ ಕಂಡು ಬಂದಿದೆ. ಕಳಪೆ ಕಾಮಗಾರಿಯಾಗಿದ್ದರೂ ಕಾಮಗಾರಿ ಮಾಡಿದವರ ಮೇಲೆ, ಮಾಡಿಸಿದವರ ಮೇಲೆ ಇದುವರೆಗೂ ಕ್ರಮ ಜರುಗಿಸಿಲ್ಲ. ಅರೆಬರೆ ಕಾಮಗಾರಿ ಮಾಡಿರುವ ಶಿಲ್ಪಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮಂಟಪದಲ್ಲಿ ವಿಗ್ರಹ ಅಳವಡಿಸಿಲ್ಲ. ಮೂರ‌್ನಾಲ್ಕು ಕೋಟಿ ರೂ. ವ್ಯಯಿಸಿದ್ದು ಸಾರ್ವಜನಿಕ ಹಣ ಅಪವ್ಯಯವಾಗಿದೆ. ಆದ್ದರಿಂದ ಯಾರು ಕಾಮಗಾರಿ ಮಾಡಿದ್ದಾರೋ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅವರಿಂದಲೇ ದೇವಸ್ಥಾನ ಪೂರ್ಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಕೀಲ ಕೆ.ವಿ.ಪ್ರವೀಣ್ ಮಾತನಾಡಿ, ಗಣಪತಿ ದೇವಸ್ಥಾನ ಕಾಮಗಾರಿ ಆರಂಭದಿಂದಲೂ ಕಳಪೆ ಎನ್ನುವ ದೂರು ಇದ್ದಾಗ್ಯೂ ಅಧಿಕಾರಿಗಳು ಗಮನಹರಿಸದೆ ಇರುವುದು ಖಂಡನೀಯ. ಶಿಲಾಮಯ ದೇವಸ್ಥಾನವನ್ನು ಮಳೆ ನೀರು ಒಳಗೆ ಬರುತ್ತದೆ ಎಂದು ತಗಡು ಹೊದೆಸಿ ತಗಡುಮಯ ದೇವಸ್ಥಾನ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿ ನಡೆದಿದ್ದಾಗ್ಯೂ ಯಾವುದೇ ಕ್ರಮವನ್ನು ಗುತ್ತಿಗೆದಾರರ ಮೇಲೆ, ಅಧಿಕಾರಿಗಳ ಮೇಲೆ ತೆಗೆದುಕೊಂಡಿಲ್ಲ. ತಕ್ಷಣ ಗಣಪತಿ ದೇವಸ್ಥಾನವನ್ನು ಮರು ನಿರ್ಮಿಸಬೇಕು. ಕಳಪೆ ಗುತ್ತಿಗೆದಾರ ಮತ್ತು ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಮಾತೃಮಂಡಳಿ ಅಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಒಂದು ಮನೆ ಕಟ್ಟಿದರೆ ಅದು ನೂರು ವರ್ಷ ಚೆನ್ನಾಗಿರಬೇಕು ಎಂದು ನಾವು ಬಯಸುತ್ತೇವೆ. ಅಂತಹದ್ದರಲ್ಲಿ ಶಿಲಾಮಯ ದೇವಸ್ಥಾನವನ್ನು ಮೂರ‌್ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕಟ್ಟಿ, ಅದು ನಿರ್ಮಾಣವಾದ ಮೂರ‌್ನಾಲ್ಕು ವರ್ಷದಲ್ಲೇ ಸೋರುತ್ತಿದೆ ಎಂದರೆ ಕಾಮಗಾರಿ ಗುಣಮಟ್ಟ ಎಂತಹ ಕಳಪೆಯಾಗಿದೆ ಎನ್ನುವುದು ಗೊತ್ತಾಗುತ್ತದೆ. ಗಣಪತಿ ದೇವಸ್ಥಾನದಲ್ಲಿ ಘಂಟೆ ಹೊಡೆದರೆ ಕರೆಂಟ್ ಹೊಡೆಯುತ್ತಿದೆ. ಇಂತಹ ಕೆಟ್ಟ ಕಾಮಗಾರಿ ಮಾಡಿ, ದೇವಸ್ಥಾನದ ಹಣವನ್ನು ಅಪವ್ಯಯ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಜರಂಗ ದಳದ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ, ಮಂಜುಗೌಡ, ಸುನೀಲ್, ಶೋಭಾ, ಪಲ್ಲವಿ, ಕಿರಣ್ ಗೌಡ, ಅರುಣ್ ಇತರರಿದ್ದರು.