

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ರಾಜ್ಯದ ಕರಾವಳಿಯ ಮೂಲಕ ದುಷ್ಕರ್ಮಿಗಳು ಒಳನುಗ್ಗಲಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ತಟರಕ್ಷಣಾ ಪಡೆ ಹೈ ಅಲರ್ಟ್ ಆಗಿದೆ. ಉಡುಪಿ ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಬೋಟ್ ಮೂಲಕ ಕರಾವಳಿ ತೀರದಲ್ಲಿ ಗಸ್ತು ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಸಕ್ತ ಸಾಲಿನ ಮೊದಲನೇ ಆವೃತ್ತಿಯ ಸಾಗರ ಕವಚ ಅಣಕು ಕಾರ್ಯಾಚರಣೆ ಇದಾಗಿದೆ. ಏ.8 ಮತ್ತು 9ರಂದು ನಡೆಯಲಿದೆ. ಈ 2 ದಿನಗಳಲ್ಲಿ 36 ಗಂಟೆ ಕಾರ್ಯಾಚರಣೆ ನಡೆಯಲಿದ್ದು, ಪ್ರಧಾನವಾಗಿ ಭಾರತೀಯ ತಟರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ನೇತೃತ್ವ ವಹಿಸಿದೆ. ಕರಾವಳಿ ಕಾವಲು ಪೊಲೀಸ್, ಇಂಡಿಯನ್ ನೇವಿ, ಕಸ್ಟಮ್ಸ್, ಸಿಐಎಸ್ಎಫ್, ಮೀನುಗಾರಿಕಾ ಇಲಾಖೆ, ಬಂದರು ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ವಿಧ್ವಂಸಕ ಕೃತ್ಯದ ಅಣಕು ಕಾರ್ಯಾಚರಣೆಯು ಕರ್ನಾಟಕ ಕರಾವಳಿ ತೀರ ಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಪೂರಕವಾಗಿದೆ. ಕರ್ತವ್ಯದಲ್ಲಿರುವ ಎಲ್ಲ ಪ್ರಕಾರದ ಕರಾವಳಿ ರಕ್ಷಣಾ ಪಡೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಕ್ಷುಬ್ಧ ಸಂದರ್ಭದಲ್ಲಿ ಹೇಗೆ ಕಾರ್ಯಾಚರಣೆ ಮಾಡಬೇಕು? ಯಾವ ರೀತಿ ತೊಡಗಿಕೊಳ್ಳಬೇಕು ಎಂದು ತರಬೇತಿ ನೀಡುವುದೂ ಸಹ ಪ್ರಮುಖ ಉದ್ದೇಶವಾಗಿದೆ. | ಮಿಥುನ್ ಎಚ್.ಎನ್. ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ವರಿಷ್ಠ